
ನವದೆಹಲಿ: ಕೆಲವು ಸರಕುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ತೆಗೆದು ಹಾಕಬೇಕೆಂಬ ಪ್ರಸ್ತಾವನೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಅನುಮೋದನೆ ನೀಡಿದೆ. ಕೆಲ ವಸ್ತುಗಳ ತೆರಿಗೆ ಏರಿಕೆ ಬಗ್ಗೆ ಬುಧವಾರ ನಿರ್ಧಾರವಾಗುವ ಸಾಧ್ಯತೆ ಇದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಚಂಡೀಗಢದಲ್ಲಿ ಮಂಗಳವಾರ ಆರಂಭವಾದ ಮಂಡಳಿಯ 47ನೇ ಸಭೆಯು ಕೆಲವು ಜಿಎಸ್ಟಿ ದರಗಳಲ್ಲಿ ಬದಲಾವಣೆಗೆ ಒಪ್ಪಿಗೆ ನೀಡಿದೆ. ಚಿನ್ನ ಮತ್ತು ಅಮೂಲ್ಯ ಹರಳುಗಳ ಅಂತಾರಾಜ್ಯ ಸಾಗಾಟಕ್ಕೆ ರಾಜ್ಯಗಳು ಇ-ವೇ ಬಿಲ್ ಕೊಡುವುದಕ್ಕೂ ಸಭೆ ಸಮ್ಮತಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಂಚನೆ ತಡೆಯೂ ಸೇರಿ ತೆರಿಗೆ ಸುಧಾರಣೆಗೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ಸಮಿತಿಗಳು ಸಲ್ಲಿಸಿದ ಮಧ್ಯಂತರ ವರದಿಗಳನ್ನು ಸಭೆ ಅಂಗೀಕರಿಸಿದೆ.
ಪರಿಹಾರ ವಿಸ್ತರಣೆ ಇಂದು ಚರ್ಚೆ: 2022ರ ಜೂನ್ ನಂತರವೂ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ವಿಸ್ತರಣೆ, ಕ್ಯಾಸಿನೊ, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ಜೂಜಿನ ಮೇಲೆ ಶೇಕಡ 28 ಜಿಎಸ್ಟಿ ಹೇರಿಕೆ ಮುಂತಾದ ಮಹತ್ವದ ವಿಚಾರಗಳನ್ನು ಸಭೆ ಬುಧವಾರ ಚರ್ಚೆಗೆ ಎತ್ತಿಕೊಳ್ಳಲಿದೆ. ಪರಿಹಾರವನ್ನು ವಿಸ್ತರಿಸಬೇಕು ಅಥವಾ ಆದಾಯದಲ್ಲಿನ ರಾಜ್ಯಗಳ ಪಾಲನ್ನು ಈಗಿನ ಶೇಕಡ 50ರಿಂದ ಹೆಚ್ಚು ಮಾಡಬೇಕು ಎಂದು ಪ್ರತಿಪಕ್ಷ ಆಡಳಿತದ ರಾಜ್ಯಗಳು ಆಗ್ರಹಿಸುತ್ತಾ ಬಂದಿವೆ. ಸಚಿವೆ ನಿರ್ಮಲಾ ಸೀತಾರಾಮನ್ ಮಂಡಳಿಯ ನಿರ್ಧಾರಗಳ ಕುರಿತು ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.
ಛತ್ತೀಸ್ಗಢ ಮಂತ್ರಿ ಪತ್ರ: ಜಿಎಸ್ಟಿ ಪರಿಹಾರವನ್ನು ರಾಜ್ಯಗಳಿಗೆ ಇನ್ನೂ ಐದು ವರ್ಷ ವಿಸ್ತರಿಸುವಂತೆ ಆಗ್ರಹಿಸಿ ಛತ್ತೀಸ್ಗಢದ ಹಣಕಾಸು ಮಂತ್ರಿ ಟಿ.ಎಸ್. ಸಿಂಗ್ದೇವ್ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದಾರೆ.
ಅಂಚೆ ಸೇವೆಗೆ ತೆರಿಗೆ: ಪೋಸ್ಟ್ಕಾರ್ಡ್ ಮತ್ತು ಇನ್ಲ್ಯಾಂಡ್ ಲೆಟರ್, 10 ಗ್ರಾಂಗಿಂತ ಕಡಿಮೆ ತೂಕದ ಬುಕ್ಪೋಸ್ಟ್ ಮತ್ತು ಕವರ್ಗಳನ್ನು ಹೊರತುಪಡಿಸಿ ಅಂಚೆ ಕಚೇರಿಯ ಉಳಿದೆಲ್ಲ ಸೇವೆಗಳಿಗೆ ತೆರಿಗೆ ವಿಧಿಸಬೇಕೆಂದೂ ಸಮಿತಿ ಶಿಫಾರಸು ಮಾಡಿದೆ. ಚೆಕ್ಗಳಿಗೆ ಶೇಕಡ 18 ತೆರಿಗೆ ವಿಧಿಸಲೂ ಸೂಚಿಸಿದೆ.
ಪ್ಯಾಕ್ ಮಾಡಲಾದ ಪದಾರ್ಥಗಳಿಗೂ ತೆರಿಗೆ: ಮಾಂಸ, ಮೀನು, ಮೊಸರು , ಪನ್ನೀರ್ ಮತ್ತು ಜೇನುತುಪ್ಪದಂತಹ ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಆಹಾರ ಪದಾರ್ಥಗಳಿಗೆ ಹಾಗೂ ಚೆಕ್ಗಳ ವಿತರಣೆಗೆ ಬ್ಯಾಂಕ್ಗಳು ವಿಧಿಸುವ ಶುಲ್ಕದ ಮೇಲೂ ತೆರಿಗೆ ವಿಧಿಸಲು ಸಭೆ ಸಮ್ಮತಿಸಿದೆ.
ಬೊಮ್ಮಾಯಿ ಸಮಿತಿ ಶಿಫಾರಸು
ಹೋಟೆಲ್ ರೂಮ್ ದೈನಿಕ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬಾಡಿಗೆ ಮೇಲೆ ಇರುವ ಜಿಎಸ್ಟಿ ವಿನಾಯಿತಿಯನ್ನು ತೆಗೆದು ಹಾಕಿ ಶೇಕಡ 12 ತೆರಿಗೆ ವಿಧಿಸುವಂತೆ ಬೊಮ್ಮಾಯಿ ಸಮಿತಿ ಶಿಫಾರಸು ಮಾಡಿದೆ. ಒಳರೋಗಿಗಳಿಗೆ ಆಸ್ಪತ್ರೆಗಳು ವಿಧಿಸುವ ವಾರ್ಡ್ ಬಾಡಿಗೆ (ಐಸಿಯು ಹೊರತುಪಡಿಸಿ) 5,000 ರೂಪಾಯಿಗಿಂತ ಹೆಚ್ಚಿದ್ದರೆ ಅದರ ಮೇಲೆ ಶೇಕಡ 5 ಜಿಎಸ್ಟಿ ವಿಧಿಸಬೇಕೆನ್ನುವುದು ಕೂಡ ಸಮಿತಿಯ ಇನ್ನೊಂದು ಪ್ರಮುಖ ಶಿಫಾರಸಾಗಿದೆ. ಉತ್ತರಪ್ರದೇಶದ ಲಖನೌದಲ್ಲಿ 2021ರ ಸೆ. 17ರಂದು ನಡೆದ 45ನೆಯ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ದರಗಳಲ್ಲಿ ಪರಾಮರ್ಶೆ, ಕೆಳಮುಖ ತೆರಿಗೆ ರಚನೆಗಳಲ್ಲಿ ತಿದ್ದುಪಡಿ ಹಾಗೂ ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲು ಸಚಿವರ ಸಮಿತಿ ರಚಿಸಲು ತೀರ್ವನಿಸಲಾಗಿತ್ತು. ಸಮಿತಿಗೆ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿದ್ದು, ಪಶ್ಚಿಮಬಂಗಾಳ, ಬಿಹಾರ, ಕೇರಳ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಮಂತ್ರಿಗಳು ಸದಸ್ಯರಾಗಿದ್ದಾರೆ. ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವಂತಹ 2 ಶಿಫಾರಸನ್ನು ಒಳಗೊಂಡ ಮಧ್ಯಂತರ ವರದಿಯನ್ನು ಈ ಸಮಿತಿ ಮಂಡಿಸಿತ್ತು.