ಧಾರವಾಡದಲ್ಲಿ 2000 ಸಾವಿರಕ್ಕೂ ಅಧಿಕ ಪಿಜಿಗಳಿಗೆ ನೋಟಿಸ್ ನೀಡಲು ಮುಂದಾದ ಪಾಲಿಕೆ

ಧಾರವಾಡದಲ್ಲಿ ಇತ್ತೀಚೆಗೆ ಕೋಚಿಂಗ್ ಕೇಂದ್ರಗಳ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಲೇ ಇದೆ. ಒಂದು ಕಾಲಕ್ಕೆ ಎಲ್ಲೋ ನಿಂತು ಒಂದು ಕಲ್ಲು ಎಸೆದ್ರೆ ಅದು ಯಾವುದಾದ್ರೂ ಸಾಹಿತಿ ಮನೆ ಮೇಲೆ ಹೋಗಿ ಬಿಳುತ್ತೆ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಆದ್ರೀಗ ಅದು ಬದಲಾಗಿದೆ.
ಹೌದು, ಈಗ ಎಲ್ಲೋ ನಿಂತು ಕಲ್ಲು ಎಸೆದ್ರೆ ಅದೊಂದು ಕೋಚಿಂಗ್ ಕೇಂದ್ರ ಇಲ್ಲವೋ ಪಿಜಿ ಮೇಲೆ ಹೋಗಿ ಬೀಳುತ್ತೆ ಅನ್ನೋ ಮಾತು ಚಾಲ್ತಿಗೆ ಬಂದಿದೆ. ಐಎಎಸ್, ಕೆಎಎಸ್, ಪೊಲೀಸ್ ನೇಮಕಾತಿಯಿಂದ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಟ್ಟದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರಗಳಿವೆ.
ನೋಟಿಸ್ ನೀಡಲು ಮುಂದಾದ ಪಾಲಿಕೆ
ಒಂದು ಅಂದಾಜಿನ ಪ್ರಕಾರ, ಇಲ್ಲಿರೋ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದು ಲಕ್ಷದ ಮೇಲಿದೆ. ಹೀಗಾಗಿ ಇದಕ್ಕೆ ತಕ್ಕಂತೆ ಧಾರವಾಡದಲ್ಲೀಗ ಮೂಲೆ ಮೂಲೆಯಲ್ಲಿ ಸಾವಿರಾರೂ ಪಿಜಿಗಳು ತಲೆ ಎತ್ತಿವೆ. ಆದ್ರೆ ಪಿಜಿ ತೆರೆಯೋದು ಕಮರ್ಷಿಯಲ್ ವ್ಯಾಪ್ತಿಗೆ ಬರುತ್ತದೆ. ಆದ್ರೆ ಬಹುತೇಕ ಕಡೆ ವಾಸದ ಮನೆಗಳನ್ನೇ ಪಿಜಿಗಳನ್ನಾಗಿ ಮಾಡಿದ್ದು, ಇವುಗಳಿಗೆ ಯಾವುದೇ ತೆರಿಗೆಯೂ ಇಲ್ಲ. ಇದನ್ನು ಮನಗಂಡ ಮಹಾನಗರ ಪಾಲಿಕೆ ನೋಟಿಸ್ ನೀಡಲು ಮುಂದಾಗಿದೆ.
ಎರಡು ಸಾವಿರಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್
ಧಾರವಾಡ ಜೋನ್ 2 ರಲ್ಲಿಯೇ ಈಗ ಎರಡು ಸಾವಿರಕ್ಕೂ ಹೆಚ್ಚು ಪಿಜಿಗಳಿಗೆ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ತಿಳಿಸಲಾಗಿದೆ. ಆರಂಭದಲ್ಲಿ ಇದೊಂದೆ ಝೋನ್‌ನಲ್ಲಿ ನೋಟಿಸ್ ನೀಡಿಲಾಗುವುದು ಎಂದು ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದ್ರೆ.
ಪರವಾನಿಗೆ ಇಲ್ಲದೆ ಇರೋ ಪಿಜಿಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ಮನೆಗಳಲ್ಲಿ ಪಿಜಿ ನಡೆಸುತ್ತಿರೊ 40 ಮನೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಪಾಲಿಕೆ ಕಮಿಷನರ್ ಗೋಪಾಲ ಕೃಷ್ಣ ಹೇಳಿದ್ದಾರೆ.
ಇನ್ನು ಧಾರವಾಡದಲ್ಲಿ ಆರಂಭದಲ್ಲಿ ಸಪ್ತಾಪುರ ಹಾಗೂ ಜಯ ನಗರ ಭಾಗದಲ್ಲಿ ಮಾತ್ರವೇ ಕೋಚಿಂಗ್ ಕೇಂದ್ರಗಳಿದ್ದವು. ಹೀಗಾಗಿ ಆ ಪ್ರದೇಶದ ಸುತ್ತಮುತ್ತ ಮಾತ್ರವೇ ಪಿಜಿಗಳು ಇರುತ್ತಿದ್ದವು. ಆದ್ರೆ ಈಗ ಕೋಚಿಂಗ್ ಕೇಂದ್ರಗಳ ವ್ಯಾಪ್ತಿಯೂ ಜಯನಗರ, ಸಪ್ತಾಪುರ ಮೀರಿ ಬೆಳೆದಿದೆ.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆ
ಈ ಎರಡೂ ಏರಿಯಾಗಳಲ್ಲಿ ಸಂಪೂರ್ಣವಾಗಿ ಪಿಜಿಗಳು, ವಿವಿಧ ಕೋರ್ಸ್ ಕಲಿಸುವ ಕೇಂದ್ರಗಳೇ ಇವೆ. ಇನ್ನು ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಕಾಲೇಜ್ ಗಳಿದ್ದು, ಇಲ್ಲಿಗೆ ಬೇರೆ ಜಿಲ್ಲೆಗಳವರೂ ಕಲಿಯಲು ಬರುತ್ತಾರೆ. ಆದ್ರೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ ಲಭ್ಯತೆಯೂ ಇಲ್ಲ. ಹೀಗಾಗಿ ಎಲ್ಲರೂ ಪಿಜಿಗಳನ್ನೇ ಆಶ್ರಯಿಸುತ್ತಾರೆ.
ಇದೇ ಕಾರಣಕ್ಕೆ ಈ ಹಿಂದೆಲ್ಲ ಮನೆಗಳನ್ನ ಕುಟುಂಬಗಳಿಗೆ ಬಾಡಿಗೆ ಕೊಡುತ್ತಿದ್ದವರೆಲ್ಲರೂ ಅದೇ ಮನೆಗಳನ್ನು ಐದಾರು ಬೆಡ್ ಹಾಕಿ, ಇಂತಿಷ್ಟು ಅಂತಾ ದರ ನಿಗದಿ ಮಾಡಿ ಪಿಜಿ ನಡೆಸುತ್ತಿದ್ದಾರೆ. ಇದರಿಂದ ಪಾಲಿಕೆ ಆದಾಯಕ್ಕೂ ಹೊಡೆತ ಬೀಳುತ್ತಿರೋ ಕಾರಣಕ್ಕೆ ಈಗ ಅವರಿಗೆ ನೊಟೀಸ್ ನೀಡಿದ್ದಾರೆ.
ಪಿಜಿ ಮಾಲೀಕರ ಅಭಿಪ್ರಾಯ ಏನು?
ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಲು ಮುಂದಾಗಿದ್ದು ಸ್ವಾಗಾರ್ತ, ಆದ್ರೆ ಪಿಜಿಗಳ ಆರಂಭಕ್ಕೆ ಮಾನದಂಡ ಏನು, ಹಾಗೂ ಎಲ್ಲರಿಗೂ ಇಂದೇ ರೀತಿಯ ಕಾನೂನು ಕ್ರಮ ಜರುಗಿಸಬೇಕಿದೆ. ಹಲವು ಬಾರಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಪಿಜಿ ಮಾಲೀಕರಾದ ಮಾಲತೇಶ್ ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಧಾರವಾಡದಲ್ಲಿ ಪಿಜಿಗಳಿಂದಲೂ ಒಂದು ಆದಾಯ ಪಡೆಯಬೇಕು ಎಂದು ಪಾಲಿಕೆ ಮುಂದಾಗಿದೆ. ಇದರೊಂದಿಗೆ ನಗರದ ಸ್ವಚ್ಛತೆ, ಅಚ್ಚುಕಟ್ಟುತನಕ್ಕೂ ಒಂದು ವ್ಯವಸ್ಥೇ ಜಾರಿಗೆ ತರಬೇಕು ಅನ್ನೋ ಉದ್ದೇಶದಿಂದ ಮಹಾನಗರ ಪಾಲಿಕೆ ಮಾಡುತ್ತಿರೋ ಕಾರ್ಯವೇನೋ ಒಳ್ಳೆಯದೇ ಆಗಿದೆಯಾದ್ರೂ, ಈಗ ನೋಟಿಸ್ ನೀಡುತ್ತಿರೊ ಪಾಲಿಕೆ ಮುಂದೆ ಅದೆಷ್ಟು ತೆರಿಗೆ ಹೇರಬಹುದು ಅನ್ನೋ ಆತಂಕದ ಪ್ರಶ್ನೆಯೂ ಈಗ ಪಿಜಿಗಳ ಮಾಲೀಕರನ್ನು ಕಾಡುತ್ತಿದೆ.