ರೌಡಿಗಳ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ಬಗ್ಗೆ ಡಿಸಿಪಿ ಗಡಾದಿ ಹೇಳಿದ್ದೇನು..?

ಮುಂಜಾಗ್ರತಾ ಕ್ರಮವಾಗಿ ಬೆಳ್ಳಂ ಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದೇವೆ. ಈ ಬಾರಿ 26 ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದೇವೆ. ಇನ್ನು ರೌಡಿಗಳು ಇದ್ದಾರೆ, ಅವರ ಲಿಸ್ಟ್ ಮಾಡಿಕೊಂಡು ಅವರ ಮೇಲೆ ನಿಗಾ ಇಡುತ್ತೇವೆ. ಈ ದಾಳಿ ನಿರಂತರ ಪ್ರಕ್ರಿಯೆಯಾಗಿದ್ದು ಮತ್ತೆ ದಾಳಿ ಮಾಡುತ್ತೇವೆ ಎಂದು ಡಿಸಿಪಿ ರವೀಂದ್ರ ಗಡಾದಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ ಇಂದು ಬೆಳಗಿನ ಜಾವ ಏಕಕಾಲಕ್ಕೆ 26 ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದೇವೆ. ಎಸಿಪಿ, ಸಿಪಿಐಗಳ ನೇತೃತ್ವದಲ್ಲಿ 26 ತಂಡಗಳನ್ನು ರಚನೆ ಮಾಡಿದ್ದೇವು. ಪ್ರತಿಯೊಂದು ತಂಡದಲ್ಲಿ 8-10 ಸಿಬ್ಬಂದಿಗಳು, ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಮೂವರು ರೌಡಿಗಳ ಮನೆ ಮೇಲೆ ದಾಳಿ ಮಾಡಿದ ವೇಳೆ ಆಯುಧಗಳು ಸಿಕ್ಕಿವೆ. ಭಾರತದ ಆಯುಧ ಕಾಯ್ದೆ ಪ್ರಕಾರ ಆ ಮೂವರು ರೌಡಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಯಾವ್ಯಾವ ರೌಡಿಗಳು ಆಕ್ಟಿವ್ ಇದ್ದಾರೆ ಅವರನ್ನು ಪರಿಶೀಲನೆ ಮಾಡಿ ಶೀಘ್ರವೇ ರೌಡಿಪರೇಡ್ ನಡೆಸುತ್ತೇವೆ. ಈಗಾಗಲೇ ಗೂಂಡಾ ಕಾಯ್ದೆಯಡಿ ಇಬ್ಬರು ರೌಡಿಗಳನ್ನು ಗಡಿಪಾರು ಮಾಡಿದ್ದೇವೆ. ಇನ್ನು ಇಬ್ಬರು ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ಸ್ಪಷ್ಟಪಡಿಸಿದ್ದಾರೆ.