ಉದಯಪುರ ಘಟನೆ ಖಂಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ ಅಸದುದ್ದೀನ್ ಉವೈಸಿ

ಹೈದರಾಬಾದ್: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಟೈಲರ್ ಹತ್ಯೆಯನ್ನು ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇಬ್ಬರು ಶಸ್ತ್ರಧಾರಿಗಳು ಉದಯಪುರದಲ್ಲಿ ಮಂಗಳವಾರ ಟೈಲರ್ ಒಬ್ಬರನ್ನು ಹತ್ಯೆ ಮಾಡಿ ಇಸ್ಲಾಂಗೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆಸುತ್ತಿರುವುದಾಗಿ ಘೋಷಿಸುವ ವೀಡಿಯೊವನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ್ದರು.
ಈ ಘಟನೆಯ ನಂತರ ರಾಜಸ್ಥಾನ ನಗರದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕಫ್ಯೂ ವಿಧಿಸಲಾಗಿದೆ.
ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದಂಗವಾಗಿ ಭೋಪಾಲ್‌ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉವೈಸಿ, ‘ಪ್ರವಾದಿ ಮುಹಮ್ಮದ್ ವಿರುದ್ಧದ ಹೇಳಿಕೆಗಳಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರರನ್ನು ಬಂಧಿಸುವಂತೆ ಒತ್ತಾಯಿಸಿದರು.
‘ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ. ಯಾರನ್ನಾದರೂ ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರೂ ಇತರರನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇದೊಂದು ಅಪರಾಧ. ಆದರೆ ನೂಪುರ್ ಶರ್ಮಾ ಅವರನ್ನೂ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.
ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ಘೋರ ಎಂದು ಬಣ್ಣಿಸಿದ ಅವರು, ಸರಕಾರವು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಅಂತಹ ಹಿಂಸಾಚಾರವನ್ನು ವಿರೋಧಿಸುವುದು ಎಐಎಂಐಎಂ ನ ಸ್ಥಿರವಾದ ನಿಲುವು ಎಂದು ಹೇಳಿದರು.