ಆಗಸ್ಟ್ 6ಕ್ಕೆ ಉಪ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ

ನವದೆಹಲಿ, ಜೂನ್ 28: ಭಾರತದ ಮುಂದಿನ ಉಪ ರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ನಡೆಸಬೇಕಾದ ಅವಶ್ಯಕತೆಯಿದ್ದಲ್ಲಿ ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
ದೇಶದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮನಿರ್ದೇಶನಕ್ಕೆ ಜುಲೈ 17 ಕೊನೆಯ ದಿನಾಂಕವಾಗಿದೆ.
ಆಗಸ್ಟ್ 6ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಪ್ರಸ್ತುತ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಧಿಕಾರಾವಧಿಯು ಮುಂದಿನ ಆಗಸ್ಟ್ 10ರ 2022ರಂದು ಕೊನೆಗೊಳ್ಳಲಿದೆ. “ಭಾರತದ ಸಂವಿಧಾನದ 68ನೇ ವಿಧಿಯ ಪ್ರಕಾರ, ಉಪ ರಾಷ್ಟ್ರಪತಿ ನಿರ್ಗಮನಕ್ಕೂ ಪೂರ್ವದಲ್ಲಿಯೇ ತೆರವಾಗುವ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ನೂತನ ಉಪ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಸಬೇಕಾಗುತ್ತದೆ.
ಉಪ ರಾಷ್ಟ್ರಪತಿ ಆಯ್ಕೆಯ ವಿಧಾನ:
2022ರಲ್ಲಿ ದೇಶದ 16ನೇ ಉಪ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಸಲಾಗುತ್ತದೆ. ಈ ವೇಳೆ ಸಂಸತ್ ಉಭಯ ಸದನಗಳ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭೆಯ 233 ಚುನಾಯಿತ ಸದಸ್ಯರು, ರಾಜ್ಯಸಭೆಯ 12 ನಾಮ ನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ 543 ಸದಸ್ಯರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟು ಮೂರನೇ ಎರಡರಷ್ಟು ಮತಗಳನ್ನು ಪಡೆದುಕೊಳ್ಳುವ ಅಭ್ಯರ್ಥಿಯು ಮುಂದಿನ ಉಪ ರಾಷ್ಟ್ರಪತಿ ಆಗಿ ಆಯ್ಕೆ ಆಗಲಿದ್ದಾರೆ.