ಲಂಚ ಪಡೆಯುತ್ತಿದ್ದ ಟ್ರಾಫಿಕ್ ಪೊಲೀಸ್ ಸಸ್ಪೆಂಡ್

ಬೆಂಗಳೂರು : ಕಾರಿನಲ್ಲಿ ವಾಶ್ ಬೇಸಿನ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದು 2,500 ರೂಪಾಯಿ ಲಂಚ ಪಡೆದಿದ್ದಕ್ಕಾಗಿ ಬೆಂಗಳೂರಿನಲ್ಲಿ ಇಬ್ಬರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೂನ್ 10 ರಂದು, ಕೇರಳ ಮೂಲದ ಸಂತೋಷ್ ಕುಮಾರ್ ಎಂಬ ವ್ಯಕ್ತಿ ಕೇರಳ ನೋಂದಣಿಯ ತಮ್ಮ ಕಾರಿನಲ್ಲಿ ಬೆಂಗಳೂರು ನಗರದಲ್ಲಿ ಪ್ರಯಾಣಿಸುತ್ತಿದ್ದರು.
ಇದೇ ವೇಳೆ ಹಲಸೂರು ಗೇಟ್ ನಿಲ್ದಾಣದ ಬಳಿ ಇಬ್ಬರು ಟ್ರಾಫಿಕ್ ಸಿಬ್ಬಂದಿ ಅವರನ್ನು ತಡೆದರು. ಸಂತೋಷ್ ತಮ್ಮ ಕಾರಿನಲ್ಲಿ ವಾಶ್ ಬೇಸಿನ್ ಕೊಂಡೊಯ್ಯುತ್ತಿದ್ದುದನ್ನು ನೋಡಿದ ಟ್ರಾಫಿಕ್ ಸಿಬ್ಬಂದಿ ಅವರ ನೋಂದಣಿ ದಾಖಲೆಗಳನ್ನು ಕೇಳಿದರು.
ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ರವಿಕಾಂತೇಗೌಡ ಬಿ ಆರ್ ಮಾಹಿತಿ ನೀಡಿರುವ ಪ್ರಕಾರ, ಕಾರು ಚಾಲಕ ಸಂತೋಷಷ್ ಬಳಿ ಈ ಇಬ್ಬರು ಅಧಿಕಾರಿಗಳು ಆರಂಭದಲ್ಲಿ 20,000 ರೂ. ದಂಡವಿಧಿಸುವುದಾಗಿ ಹೇಳಿದ್ದಾರೆ.
20 ಸಾವಿರ ದಂಡ ಪಾವತಿಸಲು ಬೇಡಿಕೆ
ಸಂತೋಷ್ ಅವರು 20 ಸಾವಿರ ದಂಡ ಪಾವತಿಸಲು ಒಪ್ಪದೇ ಪ್ರತಿಭಟನೆ ಮಾಡಿದ್ದಾರೆ. ನಂತರ, ಇಬ್ಬರು ಅಧಿಕಾರಿಗಳು 2,500 ರೂ ಪಾವತಿಸಲು ಒತ್ತಾಯಿಸಿದರು. ಅವರು ಯಾವುದೇ ರಸೀದಿಯನ್ನು ನೀಡದೇ ಸಂತೋಷ್ ಅವರು ನೀಡಿದ್ದ ರೂ.2500ನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ಆದರೆ ಕಾರು ಮಾಲೀಕ ಸಂತೋಷ್ ಇದರ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅಲ್ಲದೇ ಇಮೇಲ್ ಮೂಲಕ ತಕ್ಷಣವೇ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಹಿರಿಯ ಅಧಿಕಾರಿಗಳಿಂದ ಪರಿಶೀಲನೆ
ಸಂತೋಷ್ ಅವರು ತಮ್ಮ ದೂರಿನ ಇಮೇಲ್ ಮಾಡಿದ ನಂತರ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಂತೋಷ್ ಅವರ ವಾಹನವದ ದಾಖಲೆಗಳನ್ನು ಪರಿಶೀಲಿಸಲು ಮಾತ್ರ ನಿಲ್ಲಿಸಲಾಗಿತ್ತು. ಅವರು ಯಾವುದೇ ಅಪರಾಧ ಮಾಡಿರಲಿಲ್ಲ ಎಂದು ಕಂಡುಬಂದಿದೆ. ಇಬ್ಬರು ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡುಬಂದ ನಂತರ, ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಈ ಪ್ರಕರಣದ ಕುರಿತು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.