ಸಲ್ಮಾನ್ ಖಾನ್ಗೆ ಮುತ್ತು ಕೊಟ್ಟು ಟ್ರೋಲ್ ಆಗಿದ್ದ ಪಂಜಾಬ್ ಗಾಯಕಿ ಶೆಹನಾಜ್ ಪ್ರತಿಕ್ರಿಯೆ ಹೀಗಿದೆ!

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆ ಮುಜುಗರವಾಗಿ ವರ್ತಿಸಿ ಭಾರೀ ಟ್ರೋಲ್ಗೊಳಗಾಗಿದ್ದ ಬಿಗ್ಬಾಸ್ ಖ್ಯಾತಿಯ ಪಂಜಾಬ್ ಗಾಯಕಿ ಶೆಹನಾಜ್ ಗಿಲ್ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಸಲ್ಮಾನ್ ಖಾನ್ ನಿವಾಸದಲ್ಲಿ ನಡೆದ ಈದ್ ಪಾರ್ಟಿ ಮುಗಿಸಿ ವಾಪಸ್ಸಾಗುವ ವೇಳೆ ಸಲ್ಮಾನ್ ಖಾನ್ ಕೈ ಹಿಡಿದೇ ಹೊರಬಂದ ಶೆಹನಾಜ್, ತಮ್ಮ ಕಾರಿನವರೆಗೂ ಸಲ್ಮಾನ್ ಅವರನ್ನು ತಬ್ಬಿ ಹಿಡಿದು, ಮುತ್ತು ಕೊಟ್ಟು ಮುಜುಗರಕ್ಕೊಳಗಾಗುವಂತೆ ಮಾಡಿದ್ದರು.
ಸ್ವತಃ ಸಲ್ಮಾನ್ ಖಾನ್ ಕೂಡ ಬಿಡಿಸಿಕೊಳ್ಳು ಎಷ್ಟೇ ಪ್ರಯತ್ನಪಟ್ಟರೂ, ಎಲ್ಲರ ಮುಂದೆ ಸಲ್ಮಾನ್ ಅವರನ್ನು ಬಿಡದೇ ನಿಂತಿದ್ದ ಶೆಹನಾಜ್ ಅವರನ್ನು ನೆಟ್ಟಿಗರು ಭಾರೀ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಶೆಹನಾಜ್, ನಾನು ಕೇವಲ ಧನಾತ್ಮಕ ವಿಷಯಗಳನ್ನಷ್ಟೇ ತೆಗೆದುಕೊಳ್ಳುವೆ, ಋಣಾತ್ಮಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ನಲ್ಲಿ ಬ್ಯಾಡ್ ಬಾಯ್ ಎಂದು ಕರೆಸಿಕೊಂಡಿದ್ದರೂ ಸಹ, ತಮ್ಮ ಉತ್ತಮ ವ್ಯಕ್ತಿತ್ವದಿಂದ ತಮ್ಮದೇ ಇಮೇಜ್ ಗಳಿಸಿಕೊಂಡಿರುವ ಸಲ್ಮಾನ್ ಖಾನ್ ಅವರೊಂದಿಗೆ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಟ್ವಿಟ್ಟಿಗರು ಟ್ರೋಲ್ ಮಾಡಿದ್ದರು. ಅಲ್ಲದೇ ಬಿಗ್ ಬಾಸ್ 13ನೇ ಆವೃತ್ತಿಯಲ್ಲಿ ಪರಿಚಯವಾಗಿದ್ದ ಸಿದ್ಧಾರ್ಥ್ ಶುಕ್ಲಾ ಅವರಿಲ್ಲ ಹಾಗಾಗಿ ಸಲ್ಮಾನ್ ಅವರನ್ನೇ ಸಿದ್ಧಾರ್ಥ್ ಎಂದುಕೊಂಡಿರಬಹುದು ಎಂದೂ ಕೂಡ ಕೆಲವರು ಪ್ರತಿಕ್ರಿಯಿಸಿದ್ದರು.