ದೇವಸ್ಥಾನ, ಮಸೀದಿ, ಚರ್ಚ್ಗೆ ಹೋಗದಂತೆ ಕೊಲೆಗಾರರಿಗೆ ತಡೆವೊಡ್ಡಬೇಕು: ವಿನಯ್ ಗುರೂಜಿ

ಶಿವಮೊಗ್ಗ: ‘ಮತ್ತೊಬ್ಬರನ್ನು ಕೊಂದು ಬದುಕು’ ಎಂದು ಯಾವ ಧರ್ಮವೂ ಹೇಳಿಲ್ಲ. ಮನುಷ್ಯ ಮನುಷ್ಯರನ್ನು ಕೊಲೆ ಮಾಡುವುದನ್ನು ಯಾರೂ ಬೆಂಬಲಿಸುವುದಿಲ್ಲ ಎಂದು ಹರಿಹರಪುರ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು.
ಸಕ್ರೆಬೈಲ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ, ಕೊಲೆಗಟುಕರಿಗೆ ಸಮಾಜವು ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳಿಗೆ ಹೋಗದಂತೆ ತಡೆವೊಡ್ಡಬೇಕು.
ಆಗ ಮಾತ್ರ ಅಮಾಯಕರ ಮೇಲಾಗುವ ಹಲ್ಲೆ, ದೌರ್ಜನ್ಯ ಮತ್ತು ಪ್ರಾಣ ಹಾನಿಯನ್ನೂ ತಪ್ಪಿಸಬಹುದು ಎಂದರು.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರನ್ನು ಕೊಲೆ ಮಾಡಲು ಬಂದಾಗ ಅಕ್ಕಪಕ್ಕದ ಅಂಗಡಿಯವರು ಏನು ಮಾಡುತ್ತಿದ್ದರು? ಶಿವಮೊಗ್ಗದಲ್ಲೂ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆಯಾದಾಗಲೂ ಅಂಗಡಿಯವರು ಮತ್ತು ಅಕ್ಕಪಕ್ಕದವರು ಸುಮ್ಮನೇ ನೋಡುತ್ತಾ ನಿಂತಿದ್ದರು. ಇದೇ ನಮ್ಮ ಜವಾಬ್ದಾರಿನಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕೃಷ್ಣ ಆಯುಧ ಎತ್ತಿದ್ದು ಅಮಾಯಕರ ಮೇಲಲ್ಲ. ರಾಕ್ಷಸರ ಮೇಲೆ ಆಯುಧ ಪ್ರಯೋಗ ಮಾಡಿದ. ಯಾವ ಧರ್ಮವೂ ಅಮಾಯಕರನ್ನು ಕೊಲೆ ಮಾಡು ಎನ್ನುವುದಿಲ್ಲ. ಆದರೆ ಇಂತಹ ಘಟನೆಗಳು ಸಂಭವಿಸಿದಾಗ ಸಮಾಜ ಪ್ರತಿಕ್ರಿಯಿಸಬೇಕು. ಆದರೆ ನಮ್ಮ ಜನರು ತಮ್ಮ ಮನೆಯಲ್ಲಿ ಏನೂ ಆಗಿಲ್ಲವೆಂದು ಸಮಾಧಾನಕರ ಪಟ್ಟುಕೊಂಡು ಸುಮ್ಮನಾಗುತ್ತಿದ್ದಾರೆ. ಅದೇ ಕಾರಣಕ್ಕೆ ಕೊಲೆ, ಸುಲಿಗೆ, ದರೋಡೆ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪರಾಧ ಕೃತ್ಯ ನಡೆಸುವವರಿಗೆ ಮೊದಲು ಸರಿಯಾಗಿ ಬುದ್ಧಿ ಕಲಿಸಬೇಕು. ಆ ಮೇಲೆ ಪೊಲೀಸರಿಗೆ ಒಪ್ಪಿಸಬೇಕು. ಆದರೆ, ಅಪರಾಧ ಮಾಡುವವರನ್ನು ನೋಡಿಯೂ ಸುಮ್ಮನಾಗುತ್ತಿದ್ದೇವೆ. ಇದು ಸಮಾಜದ ದೌರ್ಬಲ್ಯವೂ ಆಗಿದೆ. ಇದನ್ನೇ ಬಳಸಿಕೊಂಡು ಕಿಡಿಗೇಡಿಗಳು ಇಂತಹ ಕೃತ್ಯಗಳನ್ನು ಪದೇಪದೆ ಎಸಗುತ್ತಿದ್ದಾರೆ. ದುಷ್ಕೃತ್ಯಗಳನ್ನು ನೋಡಿ ಸುಮ್ಮನೆ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ, ಪ್ರಯೋಜನವೂ ಇಲ್ಲ ಎಂದರು.