fbpx
Karnataka News

‘ಕಟ್ಟಡ ಕಾರ್ಮಿಕ’ರ ಆರೋಗ್ಯ ಕಾಳಜಿಗೆ ‘ಸಂಚಾರಿ ಕ್ಲಿನಿಕ್‌’ ಆರಂಭ – ಸಚಿವ ಶಿವರಾಂ ಹೆಬ್ಬಾರ್

ಬೆಂಗಳೂರು : ರಾಜ್ಯದ ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗೆ ಅನುವಾಗುವಂತೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಈ ಸಾಲಿನ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಘೋಷಿಸಿರುವ ಯೋಜನೆಗಳ ತ್ವರಿತ ಜಾರಿಗೆ ಕಾರ್ಮಿಕ ಇಲಾಖೆ ಮುಂದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ( Minister Shivaram Hebbar ) ಹೇಳಿದರು.

 

ರಾಜ್ಯದ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಉತ್ತಮ ಆರೋಗ್ಯ ಸೇವೆ ನೀಡುವ ಜತೆಗೆ ಅವರಿದ್ದಲ್ಲಿಗೇ ಚಿಕಿತ್ಸಾಲಯವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯಡಿ ‘ಶ್ರಮಿಕ ಸಂಜೀವಿನಿ- ಸಂಚಾರಿ ಚಿಕಿತ್ಸಾ’ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, 2020-21ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಾದ್ಯಂತ 10 ಮತ್ತು 21-22ನೇ ಸಾಲಿನಲ್ಲಿ 32 ಸಂಚಾರಿ ಕ್ಲಿನಿಕ್‌ಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಪ್ರತಿಯಾಗಿ ಸಂಚಾರಿ ಚಿಕಿತ್ಸಾಲಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

 

ಈ ಯೋಜನೆಯ ಮೊದಲ ಹಂತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಮೂರು ಸಂಚಾರಿ ಚಿಕಿತ್ಸಾಲಯಗಳನ್ನು ಆರಂಭಿಸಿದ್ದನ್ನು ಸ್ಮರಿಸಿದ ಸಚಿವರು, ಮುಂದಿನ ದಿನಗಳಲ್ಲಿ ಈ ಸಂಚಾರಿ ಕ್ಲಿನಿಕ್‌ ಸೇವೆ ರಾಜ್ಯದ ಎಲ್ಲ ವಲಯಗಳಲ್ಲಿ ಲಭ್ಯವಾಗಲಿದೆ ಎಂದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ದಿನ ನಿತ್ಯ ದುಡಿತದಲ್ಲಿ ಇರುವ ಕಾರಣದಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗೆ ಅನಾರೋಗ್ಯವಾದಾಗ ವೈದ್ಯರ ಬಳಿ ತೆರಳಲು ಸಮಯ ಮತ್ತು ಹಣವಿಲ್ಲದೆ ತೊಂದರೆಗೆ ಇಳಗಾಗಬಾರದು ಎಂಬ ಸದುದ್ದೇಶದಿಂದ ಈ ಯೋಜನೆ ಮೂಲಕ ಅವರಿದ್ದೆಡೆಗೇ ಕ್ಲಿನಿಕ್‌ ಕೊಂಡೊಯ್ಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಕಾರ್ಮಿಕ ಸಮಯ ಮತ್ತು ಹಣ ಎರಡೂ ಉಳಿತಾಯವಾಗುವುದರ ಜತೆಗೆ ಅವರ ಆರೋಗ್ಯದ ಕಾಳಜಿಯಿಂದ ಸಮಾಜಕ್ಕೂ ಒಳಿತಾಗಲಿದೆ ಎಂದು ಹೆಬ್ಬಾರ್‌ ಅವರು ಯೋಜನೆ ಬಗ್ಗೆ ವಿವರಣೆ ನೀಡಿದರು.

ಶ್ರಮಿಕರ ಕುಟುಂಬಕ್ಕೂ ಆರೋಗ್ಯ ಸೇವೆ: ಶ್ರಮಿಕ ವರ್ಗ ಮಾತ್ರವಲ್ಲದೆ ಅವರ ಕುಟುಂಬ ವರ್ಗದ ಆರೋಗ್ಯ ಸೇವೆಗಾಗಿ ಜಾರಿ ಆಗಲಿರುವ ಈ ಮೊಬೈಲ್ ಕ್ಲಿನಿಕ್‌ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಆಧುನಿಕ ಸ್ಟ್ರೆಚ್ಚರ್, ಬೆಡ್, ಆಕ್ಷಿಜನ್ ಪರಿಕರಗಳು, ಜೀವನಾವಶ್ಯಕ ಔಷಧಗಳು, ಜಿ.ಪಿ.ಆಪರೇಟಸ್, ಇಸಿಜಿ ಸೌಲಭ್ಯ, ರೆಫ್ರಿಜರೇಟರ್, ಕೋವಿಡ್ ಪರೀಕ್ಷಾ ಸಲಕರಣೆಗಳು, ವ್ಹೀಲ್ ಚೇರ್, ಪ್ರಯೋಗಾಲಯ ಸಲಕರಣೆಗಳು, ಅವಶ್ಯಕ ವೈದ್ಯಕೀಯ ಪರಿಕರಗಳು, ಸಿಬ್ಬಂದಿಗೆ ಅಸನ ವ್ಯವಸ್ಥೆ, ಸೇವಾ ಕೇಂದ್ರಗಳ ಆರಂಭಕ್ಕೆ ಅಗತ್ಯ ಸಲಕರಣೆಗಳನ್ನು ‘ಶ್ರಮಿಕ್ ಸಂಜೀವಿನಿ’ ಹೊಂದಿದೆ ಮತ್ತು ಚಿಕಿತ್ಸೆಗೆ ಬರುವ ಪ್ರತಿ ಕಾರ್ಮಿಕನಿಗೆ ಕ್ರಮ ಸಂಖ್ಯೆ ನೀಡಿ ಪ್ರತ್ಯೇಕ ಒಪಿಡಿ ದಾಖಲೆ ನಿರ್ವಹಣೆ, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಭಿತರಿಗೆ ಔಷಧೋಪಚಾರಗಳನ್ನು ಒದಗಿಸಲಿದೆ ಎಂದು ಸಚಿವ ಹೆಬ್ಬಾರ್‌ ಹೇಳಿದರು.

 

ಸ್ಥಳದಲ್ಲಿಯೇ ಪರೀಕ್ಷೆಗಳನ್ನು ಕೈಗೊಂಡು ವರದಿ ಮತ್ತು ಚಿಕಿತ್ಸೆ ನೀಡಲು ಅನುವಾಗುವಂತೆ ಪ್ರಯೋಗಾಲಯದ ಉಪಕರಣಗಳನ್ನು ಇರಿಸಲಾಗಿದೆ. ತುರ್ತು ಚಿಕಿತ್ಸೆ ಮತ್ತು ಅಪಘಾತ ಸಂದರ್ಭದಲ್ಲಿ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ಇಎಸ್‌ಐ ಅಥವಾ ಉನ್ನತೀಕರಿಸಿದ ಆಸ್ಪತ್ರೆಗಳಿಗೆ ರವಾನಿಸಲು ಈ ಸೇವೆ ಸಹಕಾರಿ ಆಗಿದೆ ಎಂದ ಅವರು, ಆಕರ್ಷಕವಾಗಿ ರೂಪಿಸಿ ವಿನ್ಯಾಸಗೊಳಿಸಲಾಗಿರುವ ‘ಶ್ರಮಿಕ್ ಸಂಜೀವಿನಿ’ ಕ್ಲಿನಿಕ್‌ಗಳಲ್ಲಿ ಸೇವೆಗಳ ಆನ್‌ಲೈನ್ ವರದಿಗಾಗಿ ರಿಯಲ್ ಟೈಮ್ ರಿಪೋರ್ಟಿಂಗ್, ಜಿಪಿಎಸ್ ಟ್ರೇಸಿಂಗ್ ಸಿಸ್ಟಮ್, ರೋಗಿಯ ವಿವರಗಳನ್ನು ಎಂಐಎಂನಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇದಕ್ಕಾಗಿ ಬಿಎಸ್-6 ಮಾದರಿಯ ವಾಹನಗಳನ್ನು ಇಲಾಖೆ ಬಳಸಿಕೊಂಡಿದೆ ಎಂದ ಅವರು, ತುರ್ತು ಸಂದರ್ಭಗಳಲ್ಲಿ ಶ್ರಮಿಕ್ ಸಂಜೀವಿನಿ ಸೇವೆಯನ್ನು ಸಹಾಯವಾಣಿ ಸಂಖ್ಯೆಗೆ 155214ಗೆ ಕರೆ ಮಾಡಿ ಪಡೆಯಬಹುದಾಗಿದ್ದು, ಯೋಜನೆಯ ತುರ್ತು ಜಾರಿಗೆ ಅನುವಾಗುವಂತೆ ಕಾರ್ಮಿಕ ವಿಮಾ ಸಂಸ್ಥೆಯ ವೈದ್ಯಕೀಯ ಮತ್ತು ಸಿಬ್ಬಂದಿ ಸೇವೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್‌ ಜೈನ್‌, ಆಯುಕ್ತ ಅಕ್ರಂ ಪಾಷ, ಮಂಡಳಿ ಕಾರ್ಯದರ್ಶಿ ಗುರು ಪ್ರಸಾದ್‌, ಜಂಟಿ ಕಾರ್ಯದರ್ಶಿ ಶಿವಪುತ್ರ ಪಾಟೀಲ್‌, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ ಬಳ್ಳಾರಿ ಸೇರಿದಂತೆ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಅತ್ಯಾಧುನಿಕ ಸಂಚಾರಿ ಕ್ಲಿನಿಕ್

ಶ್ರಮಿಕರು ಇರುವರೆಡೆಗೆ ತೆರಳಿ ಅವರ ಆರೋಗ್ಯ ಪರೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಸಿದ್ಧಗೊಂಡಿರುವ ಈ ಸಂಚಾರಿ ಕ್ಲಿನಿಕ್‌ಗಳು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಅಣಿಗೊಂಡಿರುವುದು ವಿಶೇಷ.

ಪ್ರತಿ ಸೋಮವಾರದಿಂದ ಶನಿವಾರದವರೆಗೆ ನಿಗಧಿತ ಅವಧಿಯಲ್ಲಿ ನಿಗಧಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಈ ಸಂಚಾರಿ ಕ್ಲಿನಿಕ್ ಸೇವೆಯನ್ನು ಆರಂಭದಲ್ಲಿ ಬೆಳಗಾವಿ ವಿಭಾಗದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಭಿತರಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆಯನ್ನು ಈ ಶ್ರಮಿಕ್ ಸಂಜೀವಿನಿ ಒದಗಿಸುತ್ತಿದೆ.
ಪ್ರತಿ ಸಂಚಾರಿ ಕ್ಲಿನಿಕ್‌ಗಳು ಓರ್ವ ವೈದ್ಯ, ಓರ್ವ ನರ್ಸ್, ಓರ್ವ ಫಾರ್ಮಸಿಸ್ಟ್, ಓರ್ವ ಲ್ಯಾಬ್ ಟೆಕ್ನಿಷಿಯನ್, ಎಎನ್‌ಎಮ್, ಚಾಲಕ ಮತ್ತು ಸಹಾಯಕ ಸಿಬ್ಬಂದಿಯನ್ನು ಹೊಂದಿರಲಿದೆ.

ಹೈಟೆಕ್ ಸೇವೆಗಳು ಲಭ್ಯ

ಗುಣಮುಖ ಸೇವೆಗಳು, ಪ್ರಥಮ ಚಿಕಿತ್ಸಾ ಸೇವೆಗಳು, ಪ್ರಯೋಗಾಲಯ ಪರೀಕ್ಷಾ ಸೇವೆಗಳು, ಕೋವಿಡ್ ಪರೀಕ್ಷಾ ಸೇವೆಗಳು, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಸೇವೆಗಳು, ಅನುಸರಣಾ ಸೇವೆಗಳು, ಕುಟುಂಬ ಯೋಜನಾ ಸೇವೆಗಳು, ಪ್ರಸವ ಪೂರ್ವ ಮತ್ತು ನಂತರದ ಸೇವೆಗಳು, ಚುಚ್ಚು ಮದ್ದು ಸೇವೆಗಳು, ಸಮಾಲೋಚನಾ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಆರೋಗ್ಯ ಶಿಕ್ಷಣ ಮತ್ತು ಪರಿಸರ ನೈರ್ಮಲ್ಯ ಸೇವೆಗಳು ಸೇರಿದಂತೆ ಇತರೆ ನಿರ್ದೇಶಿತ ಹೈಟೆಕ್ ಆರೋಗ್ಯ ಸೇವೆಗಳು ಸ್ಥಳದಲ್ಲಿಯೇ ದೊರಕಲಿವೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: