ಕೋರ್ಟ್ ಆದೇಶಕ್ಕೆ ಬೆಲೆ ಇಲ್ಲವೇ? ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮಗಳಿಗೆ ಭೂಮಿ ಒದಗಿಸುವಂತೆ 3 ವರ್ಷಗಳ ಹಿಂದೆ ನೀಡಿರುವ ಆದೇಶವನ್ನು ಈವರೆಗೂ ಸಂಪೂರ್ಣವಾಗಿ ಪಾಲನೆ ಮಾಡದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮಗಳಿಗೆ ಭೂಮಿ ಒದಗಿಸುವಂತೆ 3 ವರ್ಷಗಳ ಹಿಂದೆ ನೀಡಿರುವ ಆದೇಶವನ್ನು ಈವರೆಗೂ ಸಂಪೂರ್ಣವಾಗಿ ಪಾಲನೆ ಮಾಡದ ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿರುವ ಹೈಕೋರ್ಟ್, ಸರ್ಕಾರಿ ಅಧಿಕಾರಿಗಳಿಗೆ ಕೋರ್ಟ್ ಆದೇಶದ ಬಗ್ಗೆ ಗೌರವ ಇಲ್ಲವೆಂದಾದರೆ ನ್ಯಾಯಾಲಯ ಇರುವುದೇಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ಬೆಂಗಳೂರಿನ ವಕೀಲ ಮೊಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ಕೋರ್ಟ್ ಆದೇಶಗಳನ್ನು ಸರ್ಕಾರ ಕಡೆಗಣಿಸಿದರೆ ಅದನ್ನು ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ವಕೀಲರು, ಬಹುತೇಕ ಕಡೆ ಸ್ಮಶಾನಕ್ಕೆ ಜಾಗ ನೀಡಲಾಗಿದ್ದು, ಕೆಲವೆಡೆ ಸರ್ಕಾರದ ಜಾಗವಿಲ್ಲ. ಖಾಸಗಿಯವರಿಂದ ಭೂಮಿ ಖರೀದಿಸಿ ಸ್ಮಶಾನಕ್ಕೆ ಜಾಗ ಒದಗಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಉಳಿದಂತೆ ನ್ಯಾಯಾಲಯದ ಆದೇಶ ಬಹುತೇಕ ಪಾಲನೆಯಾಗಿದೆ. ಸ್ಮಶಾನವಿಲ್ಲದ ಕೆಲ ಗ್ರಾಮಗಳಿಗೆ ಜಮೀನು ಒದಗಿಸಲು ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿ ಪೀಠ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ನಂತರ ಕಾಲಾವಕಾಶ ಕೋರಲು ಅವಕಾಶವಿಲ್ಲ. ನಿಮಗೆ ಸಮಸ್ಯೆಯಿದ್ದರೆ, ಈ ಹಿಂದೆಯೇ ಹೆಚ್ಚಿನ ಸಮಯಕ್ಕಾಗಿ ಮನವಿ ಮಾಡಬಹುದಿತ್ತು. ನ್ಯಾಯಾಲಯದಲ್ಲಿ ಕಣ್ಮುಚ್ಚಿ ಆದೇಶ ಒಪ್ಪಿಕೊಳ್ಳುತ್ತೀರಾ, ಅಂದು ನಿಮಗೆ ಯಾವ ಅಡ್ಡಿ ಇತ್ತು? ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಯಾವುದೇ ಸಬೂಬು ಹೇಳಲಾಗದು. ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ. ಹಾಗಾದರೆ, ನ್ಯಾಯಾಲಯ ಏಕೆ ಬೇಕು ಎಂದು ಪ್ರಶ್ನಿಸಿತು.
ಕೋರ್ಟ್ ಆದೇಶದ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರ ವಿರುದ್ದ ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡುತ್ತೇವೆ. ಇತರರಿಗೆ ಮಾದರಿಯಾಗಬೇಕಾದ ಸರ್ಕಾರವೇ ಈ ರೀತಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ನ್ಯಾಯಾಲಯದ ಆದೇಶವನ್ನು 6 ತಿಂಗಳಲ್ಲಿ ಪಾಲಿಸಬೇಕು ಎಂದು ಹೇಳಲಾಗಿದೆ. ಹೀಗಿದ್ದರೂ ಮತ್ತೆ ಮತ್ತೆ ಕಾಲಾವಕಾಶ ಕೋರುತ್ತಲೇ ಇದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಕೋರ್ಟ್ ಆದೇಶ ನೀಡಿ 3 ವರ್ಷಗಳ ಬಳಿಕ ಸ್ಮಶಾನಕ್ಕೆ ಜಾಗ ನೀಡಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಿದ್ದೀರಿ. ರಾಜ್ಯದಾದ್ಯಂತ ಎಷ್ಟು ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಜಾಗ ನೀಡಲಾಗಿದೆ. ಎಷ್ಟು ಗ್ರಾಮಗಳಲ್ಲಿ ಸ್ಮಶಾನವಿಲ್ಲ ಎಂಬುದನ್ನು ತೋರಿಸಿ. ಈಗ ಸಮರೋಪಾದಿಯಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸುವ ಕೆಲಸ ಮಾಡಿದರೆ ಪರೋಕ್ಷವಾಗಿ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದರೆ ಕಷ್ಟವಾಗುತ್ತದೆ ಎಂದು ಹೇಳಿತು. ಅಂತಿಮವಾಗಿ ನ್ಯಾಯಪೀಠ, ಈವರೆಗೆ ಸ್ಮಶಾನ ಜಾಗ ಇಲ್ಲದ ಎಷ್ಟು ಗ್ರಾಮಗಳಿಗೆ ಜಮೀನು ಒದಗಿಸಲಾಗಿದೆ ಎಂಬ ಬಗ್ಗೆ ಗ್ರಾಮವಾರು ಮಾಹಿತಿಯೊಂದಿಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು 2 ವಾರ ಮುಂದೂಡಿತು.
ಗೌರವ ಉಳಿಯಲಿ! ಪಿಎಸ್ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಇಲಾಖೆ ಗೌರವ ಉಳಿಸುವ ರೀತಿಯಲ್ಲಿ ಸಮರ್ಪಕವಾಗಿ ನಡೆಸಬೇಕು ಎಂದು ಪ್ರಕರಣದ ತನಿಖಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಾಸನದ ಸಿ.ಎನ್.ಶಶಿಧರ್ ಹಾಗೂ ಮಂಡ್ಯದ ಆರ್. ಶರತ್ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಸಿಐಡಿ ತನಿಖಾಧಿಕಾರಿಗಳಿಗೆ ಈ ನಿರ್ದೇಶನ ನೀಡಿತು.
ನ್ಯಾಯಾಲಯ ಜೂ.23ರಂದು ನೀಡಿದ್ದ ನಿರ್ದೇಶನದಂತೆ ಖುದ್ದು ವಿಚಾರಣೆಗೆ ಹಾಜರಾಗಿದ್ದ ಸಿಐಡಿ ಡಿಜಿಪಿ ಪಿ.ಎಸ್. ಸಂಧು, ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಪಿ.ಎಸ್.ಸಂಧು ಅವರನ್ನು ಕುರಿತು ನ್ಯಾಯಪೀಠ, ಪಿಎಸ್ಐ ನೇಮಕ ಹಗರಣದಲ್ಲಿ ಪೊಲೀಸರು, ಗಣ್ಯರು ಸೇರಿ ಹಲವು ಪ್ರಭಾವಿ ವ್ಯಕ್ತಿಗಳ ಮೇಲೆ ಆರೋಪಗಳಿವೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಸಮರ್ಪಕ ತನಿಖೆ ನಡೆಸಬೇಕಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಗಳಲ್ಲೇ ಇದೆ. ತನಿಖೆಯ ಮೇಲೆ ನ್ಯಾಯಾಲಯ ಸಂಪೂರ್ಣ ನಿಗಾ ಇಡಲಿದೆ ಎಂದು ಹೇಳಿತು.
ನೇಮಕಾತಿಯಲ್ಲೇ ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಗಂಭೀರ ವಿಚಾರ. ಸಮರ್ಪಕ ತನಿಖೆ ನಡೆಸಿ ಸತ್ಯವನ್ನು ಹೊರಗೆಳೆಯಬೇಕು. ಸಚಿವರಾಗಿರಲಿ, ಅಧಿಕಾರಿಗಳಾಗಿರಲಿ, ಯಾವುದೇ ಪ್ರಭಾವಿ ವ್ಯಕ್ತಿಗಳಾಗಿರಲಿ, ಇದರ ಹಿಂದೆ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಜು.7ಕ್ಕೆ ಮುಂದೂಡಿತು.
ಕೆಲಸ ನಾನೂ ನೋಡಿದ್ದೇನೆ…
ನ್ಯಾಯಾಲಯ ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಿಲ್ಲ. ಕೋರ್ಟ್ ಆದೇಶ ಪಾಲನೆಯಾಗುತ್ತಿದೆಯೇ ಎನ್ನುವುದಷ್ಟೇ ಬೇಕು. ಆದೇಶಗಳನ್ನು ಉಲ್ಲಂಘಿಸಿದರೆ ಸಹಿಸಲಾಗದು ಎಂದ ನ್ಯಾಯಮೂರ್ತಿ ಬಿ. ವೀರಪ್ಪ, ನಾನೂ 16 ವರ್ಷ ಸರ್ಕಾರದ ವಕೀಲನಾಗಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಗೊತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಕೆಲಸವಾಗುತ್ತವೆ. ಯಾವಾಗ ಜೈಲಿನ ವಿಷಯ ಬರು ತ್ತದೋ ಆಗ ಮನಸ್ಸು ಮಾಡುತ್ತಾರೆ ಎಂದು ಹೇಳಿದರು.