ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಪ್ರತಿಭಟನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದೇನು..?

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಅವರ ಸೇವಾರ್ಹತೆ ಆಧಾರದ ಮೇಲೆ ಅವರನ್ನು ಖಾಯಂಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತಾಧಿಕಾರಿಗಳಾದ ನಿತೇಶ್ ಪಾಟೀಲ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಪ್ರತಿಭಟನೆ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್, ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದು ನಮ್ಮ ಬೆಳಗಾವಿಯಲ್ಲಿ ಮಾತ್ರವಲ್ಲ. ಈಗಾಗಲೇ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಕುರಿತಂತೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಇನ್ನು ನಮ್ಮ ಬೆಳಗಾವಿಯಲ್ಲಿ 133ಜನ ಪೌರಕಾರ್ಮಿಕರು ಮಾತ್ರ ಖಾಯಂ ಇದ್ದಾರೆ. ಇನ್ನುಳಿದವರ ಅರ್ಹತೆಯನ್ನು ಆಧರಿಸಿ ಖಾಯಂ ಮಾಡಿಕೊಳ್ಳಲಾಗುತ್ತದೆ. ಇನ್ನು ನಮ್ಮಲ್ಲಿ 1500 ಜನ ಪೌರ ಕಾರ್ಮಿಕರು ಬೇಕು. ಆದರೆ 133 ಜನ ಕಾರ್ಯ ಮಾಡುತ್ತಿದ್ದಾರೆ. ಇಂದು ನಗರದಲ್ಲಿ ಎಲ್ಲಾ ಪೌರಕಾರ್ಮಿಕರು ಪ್ರತಿಭಟನೆ ಮಾಡುತ್ತಿರುವುದರಿಂದ ಕಸ ಸ್ವಚ್ಛಮಾಡಿಲ್ಲ. ಹಾಗಾಗಿ ಆದಷ್ಟು ಬೇಗನೇ ಕಸ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದರು.