
ಬೆಳಗಾವಿ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಗುರುವಾರ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಅಭಿನಂದಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ಕಾರಣರಾದ ರಮೇಶ ಜಾರಕಿಹೊಳಿ ಅವರು ಈಗ ಮುಂಬೈನಲ್ಲೂ ಕರ್ನಾಟಕ ಮಾದ ರಿಗೆ ಬೆನ್ನೆಲು ಬಾಗಿ ನಿಂತು ಕೆಲಸ ಮಾಡಿದ್ದಾರೆ. ಕಳೆದ 10 ದಿನಗಳಿಂದ ಮುಂಬೈನಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸೇರಿ ಬಿಜೆಪಿ ಹಲವು ನಾಯಕರ ಸಂಪರ್ಕದಲ್ಲಿ ಇದ್ದುಕೊಂಡು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ.
ಏಕನಾಥ ಶಿಂಧೆ ಸಿಎಂ ಎಂದು ಘೋಷಣೆ ಆಗುತ್ತಿದ್ದಂತೆ ಅವರನ್ನು ರಮೇಶ ಜಾರಕಿಹೊಳಿ ನೇರವಾಗಿ ಭೇಟಿಯಾಗಿ ಅಭಿನಂದಿಸಿದರು. ಇದಕ್ಕೂ ಮುನ್ನ ದೇವೇಂದ್ರ ಫಡ್ನವೀಸ್ ಮನೆಯಲ್ಲಿ ನಡೆದ ಸಭೆಯಲ್ಲಿಯೂ ರಮೇಶ ಜಾರಕಿಹೊಳಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಬಿಜೆಪಿ ಸಭೆಯ ವರಿಷ್ಠರ ಸಾಲಿನಲ್ಲಿ ರಮೇಶ ಜಾರಕಿಹೊಳಿ ಕುಳಿತುಕೊಂಡಿದ್ದು ಅಚ್ಚರಿಗೆ ಕಾರಣವಾಯಿತು.
ಏಕನಾಥ ಶಿಂಧೆ ಗುಂಪಿನ ಅನೇಕ ಶಾಸಕರೊಂದಿಗೆ ಜಾರಕಿಹೊಳಿ ಸಂಪರ್ಕದಲ್ಲಿದ್ದರು. ಸೂರತ್ ಮತ್ತು ಗುವಾಹಟಿಯಲ್ಲಿ ಇದ್ದಾಗ ತೆರೆಮರೆ ಕಸರತ್ತು ನಡೆಸಿದ್ದಾರೆಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿ ಆಗಿರುವ ಸಿ.ಟಿ.ರವಿ ಕೂಡ ಮುಂಬೈ ನಲ್ಲಿಯೇ ಇದ್ದು, ಸರ್ಕಾರ ರಚನೆಗೆ ತೆರೆಮರೆ ಕಾರ್ಯತಂತ್ರ ನಡೆಸಿದ್ದಾರೆ. ಕರ್ನಾಟಕದ ಇಬ್ಬರು ನಾಯಕರು ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.