ಚಿಕ್ಕೋಡಿ ಕೋರ್ಟ್‍ನ ಕಟ್ಟಡ ನಿರ್ಮಾಣಕ್ಕೆ 32 ಕೋಟಿ, ಅಥಣಿ ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ 37 ಕೋಟಿ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು. ಇದರಲ್ಲಿ ಚಿಕ್ಕೋಡಿಯಲ್ಲಿ ಕೋರ್ಟ್‍ನ ಕಟ್ಟಡ ನಿರ್ಮಾಣಕ್ಕೆ 32 ಕೋಟಿ, ಅಥಣಿ ನಿಪ್ಪಾಣಿ ರಸ್ತೆ ಅಗಲೀಕರಣ 37 ಕೋಟಿ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಟ್ಟಿ ಚಿನ್ನದ ಗಣಿಯಲ್ಲಿ ಒಂದು ಭಾಗದಲ್ಲಿ ರಂಧ್ರ ಕಾಣಿಸಿಕೊಂಡಿದೆ. ಅಲ್ಲಿಗೆ ತಲುಪಲು 307 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ 438 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಅನುಮೋದನೆ ದೊರೆತಿದೆ. 438 ಹುದ್ದೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ 103 ಕೋಟಿ ವೆಚ್ಚದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಅನುಮೋದನೆ ನೀಡಲಾಗಿದೆ ಎಂದರು.
ಇದರಿಂದ ಸಾಂಕ್ರಾಮಿಕ ರೋಗ ಹತೋಟಿಗೆ ತರಲು ಸಹಾಯವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಾಗೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋರ್ಟ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಕೋರ್ಟ್‍ನ ಕಟ್ಟಡ ನಿರ್ಮಾಣಕ್ಕೆ 32 ಕೋಟಿ, ಮೂಡಿಗೆರೆಯಲ್ಲಿ ಕೋರ್ಟ್‍ನ ಕಟ್ಟಡ ನಿರ್ಮಾಣಕ್ಕೆ 11 ಕೋಟಿ, ಕೋಲಾರದ ಕೋರ್ಟ್‍ಗೆ ಹೊಸ ಕಟ್ಟಡ ನಿರ್ಮಾಣಕ್ಕೆ 25 ಕೋಟಿ, ಶ್ರೀನಿವಾಸಪುರದಲ್ಲಿ ಕೋರ್ಟ್‍ನ ಕಟ್ಟಡ ನಿರ್ಮಾಣಕ್ಕೆ 15 ಕೋಟಿ, ಬಳ್ಳಾರಿಯ ಪಾರ್ವತಿನಗರದಲ್ಲಿ ಕೋರ್ಟ್‍ನ ಕಟ್ಟಡಕ್ಕೆ 121 ಕೋಟಿ, ರಾಯಚೂರು ಜಿಲ್ಲಾ ಕೋರ್ಟ್‍ನ ಹೊಸ ಕಟ್ಟಡಕ್ಕೆ 27 ಕೋಟಿ, ದಾವಣಗೆರೆ ಜಿಲ್ಲೆ ಕುಂದವಾಡ ಕೋರ್ಟ್‍ನ ಕಟ್ಟಡಕ್ಕೆ 22 ಕೋಟಿ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಬೀದರ್ ಜಿಲ್ಲೆ ಔರಾ ಗ್ರಾಮದಲ್ಲಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣ 70 ಕೋಟಿ, ಅಥಣಿ ನಿಪ್ಪಾಣಿ ರಸ್ತೆ ಅಗಲೀಕರಣ 37 ಕೋಟಿ ನೀಡಲಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಗ್ರೂಪ್‍ಗೆ ಲೀಸ್ ನೀಡಲಾಗಿತ್ತು. ಸ್ಟಾಂಪ್ ಡ್ಯೂಟಿ ರಿಜಿಸ್ಟ್ರೇಷನ್ ವೇಳೆ ಪಾವತಿ ಮಾಡಿರಲಿಲ್ಲ ಹೀಗಾಗಿ ಸ್ಟಾಂಪ್ ಡ್ಯೂಟಿ ಸರ್ಕಾರವೇ ಪಾವತಿಸಿತ್ತು. ಈಗ ಅದನ್ನು 10 ವರ್ಷಗಳಲ್ಲಿ ವಾಪಸ್ ನೀಡುವಂತೆ ಸೂಚಿಸಲಾಗಿದೆ. ರೇಣುಕಾ ಸಾಗರ ಡ್ಯಾಂ ಕುಡಿಯುವ ನೀರಿನ ಯೋಜನೆಗೆ 96.6 ಕೋಟಿ ಅನುದಾನ ನೀಡಲಾಗಿದೆ. ಅಮೃತ್ ನಗರೋತ್ಥಾನ ಯೋಜನೆಯ ನಿಯಮಗಳನ್ನು ಕೆಲವು ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೈಟ್ ಲ್ಯಾಂಡಿಂಗ್‍ಗೆ ವ್ಯವಸ್ಥೆ ಮಾಡಲಾಗಿದ್ದು, 65.5 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಅದೇ ರೀತಿ ಒಬಿಸಿ ಮೀಸಲಾತಿ ನಿಗದಿಗೆ ಭಕ್ತವತ್ಸಲ ಸಮಿತಿ ವರದಿ ಬೇಕಿದೆ ಹೀಗಾಗಿ ಭಕ್ತವತ್ಸಲ ಸಮಿತಿ ವರದಿ ಶಿಫಾರಸು ಬಳಿಕ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.