Breaking: 10 ಗಂಟೆಗಳ ಕಾಲ ರಾವತ್ ವಿಚಾರಣೆ: ಇಡಿ ವಿಚಾರಣೆ ಬಳಿಕ ಸಂಸದ ಸಂಜಯ್ ರಾವತ್ ಹೇಳಿದ್ದೇನು?

ಮುಂಬೈ, ಜುಲೈ 02: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಿವಸೇನೆ ಸಂಸದ ಸಂಜಯ್ ರಾವತ್‌ರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ವಿಚಾರಣೆಗೆ ಒಳಪಡಿಸಲಾಯಿತು.
ಮುಂಬೈನಲ್ಲಿ ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಚೇರಿಗೆ ಹಾಜರಾದ ಸಂಜಯ್ ರಾವತ್ ಸತತ 10 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ಇಡಿ ವಿಚಾರಣೆಯ ನಂತರದಲ್ಲಿ ಮಾಧ್ಯಮಗಳಿಗೆ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದರು.
ರಾಜ್ಯದ ಜನರಿಗೆ ನಮ್ಮ ಬಗ್ಗೆ ಯಾವುದೇ ರೀತಿಯಾದ ಅನುಮಾನಗಳಿಲ್ಲ. ಆದರೆ ಕೇಂದ್ರೀಯ ಸಂಸ್ಥೆಗಳಿಗೆ ನಮ್ಮ ಬಗ್ಗೆ ಅನುಮಾನಗಳು ಬಂದರೆ ಅವರ ಮುಂದೆ ಹಾಜರಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಜಯ್ ರಾವತ್ ಹೇಳಿದರು.
10 ಗಂಟೆಗಳ ಕಾಲ ರಾವತ್ ವಿಚಾರಣೆ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನನ್ನನ್ನು 10 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ನಾನು ಕೂಡ ವಿಚಾರಣೆಗೆ ಸಂಪೂರ್ಣ ಸಹಕಾರವನ್ನು ನೀಡಿದ್ದೇನೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ರಾವತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: ಚಾವಲ್ ಭೂಹಗರಣದಲ್ಲಿ ಶಿವಸೇನೆಯ ಸಂಸದ ಸಂಜಯ್ ರಾವತ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಪತ್ರಾ ಚಾವಲ್ ಭೂ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಪ್ರವೀಣ್ ರಾವತ್ 55 ಕೋಟಿ ಹಣವನ್ನು ತಮ್ಮ ಪತ್ನಿಯ ಖಾತೆಯಿಂದ ಸಂಜಯ್ ರಾವತ್ ಪತ್ನಿ ವರ್ಷಾ ಖಾತೆಗೆ ವರ್ಗಾವಣೆಯಾಗಿದ್ದು ಎಂದು ಹೇಳಲಾಗಿದೆ.
ಅದೇ ಹಣದ ವರ್ಗಾವಣೆ ಮೂಲಕ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಲಾಗಿದೆ. 2010 ಮತ್ತು 2012ರ ನಡುವೆ ಭಾರೀ ಪ್ರಮಾಣದಲ್ಲಿ ನಗದು ಪಾವತಿಗಳನ್ನು ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದ್ದು, ಸಂಜಯ್ ರಾವತ್ ಪತ್ನಿಗೆ ಪ್ರವೀಣ್ ರಾವತ್ ಪತ್ನಿ 55 ಲಕ್ಷ ರೂ ಸಾಲ ಕೂಡ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.