ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೂಡ ಧನ್ಯವಾದಗಳು. ಬೆಳಗಾವಿಯಲ್ಲಿ ನನ್ನ ಮೂರು ವರ್ಷದ ಸೇವೆ ನನಗೆ ತೃಪ್ತಿ ತಂದಿದೆ-ಲಕ್ಷ್ಮಣ್ ನಿಂಬರಗಿ

ಬೆಳಗಾವಿಯಲ್ಲಿ ನಿರ್ವಹಿಸಿದ ಸೇವೆ ನನಗೆ ನಿಜಕ್ಕೂ ಸಂತೋಷವನ್ನು ತಂದಿದೆ. ಈ ವೇಳೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬೆಳಗಾವಿ ನಿರ್ಗಮಿತ ಎಸ್‍ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಬೆಳಗಾವಿಯಿಂದ ವರ್ಗಾವಣೆಗೊಂಡ ಎಸ್‍ಪಿ ಲಕ್ಷ್ಮಣ್ ನಿಂಬರಗಿ ನೂತನ ಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಡಾ. ಸಂಜೀವ್ ಪಾಟೀಲ್‍ಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ.
2019 ಮತ್ತು 20ರ ಪ್ರವಾಹ ಸಂದರ್ಭದಲ್ಲಿ ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇವೆ. ಎಂಎಲ್‍ಎ, ಎಂಪಿ ಬೈ ಎಲೆಕ್ಷನ್ ಹಾಗೂ ಇನ್ನೂ ಅನೇಕ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಹಳ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿಅನೇಕ ಪೊಲೀಸ್ ಠಾಣೆಗಳ ನಿರ್ಮಾಣ, ಪೊಲೀಸ್ ವಸತಿನಿಲಯಗಳ ನಿರ್ಮಾಣ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಜನಸ್ನೇಹೀ ಪೊಲೀಸ್ ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಸೇವಾವಧಿ ನನಗೆ ಈ ಜಿಲ್ಲೆಯಲ್ಲಿ ಖುಷಿ ತಂದಿದೆ. ಅತೀಹೆಚ್ಚು ಪ್ರಕರಣಗಳು ಈ ಜಿಲ್ಲೆಯಲ್ಲಿಯೇ ದಾಖಲಾಗುತ್ತವೆ.
ಹಾಗಾಗಿ ಬೆಳಗಾವಿ ರಾಜ್ಯದಲ್ಲಿ ಅತೀ ದೊಡ್ಡ ಜಿಲ್ಲೆಯಾಗಿರೋದರಿಂದ ನನಗೆ ಇಲ್ಲಿ ಸೇವೆ ಮಾಡಿದ್ದು ತೃಪ್ತಿ ತಂದಿದೆ. ಇನ್ನು ಇಲ್ಲಿನ ಜಿಲ್ಲಾಡಳಿತ ಸಮರ್ಥವಾಗಿ ಆಡಳಿತವನ್ನು ನಡೆಸಲು ಸಮರ್ಥವಾಗಿದ್ದು ಯಶಸ್ವಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೂಡ ಧನ್ಯವಾದಗಳು.