ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ (ಜು.8ರ ವರೆಗೆ) ಉತ್ತಮ ಮಳೆಯಾಗಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ,

ಬೆಂಗಳೂರು: ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ (ಜು.8ರ ವರೆಗೆ) ಉತ್ತಮ ಮಳೆಯಾಗಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ, ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಮತ್ತು ಉಳಿದೆಡೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜು.5 ಮತ್ತು 6ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜು.8ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು. ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ, ಕಲಬುರಗಿ, ಬೀದರ್, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದು ಜು.8ರ ವರೆಗೂ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಆರ್‌ಎಸ್‌ಗೆ ಒಳ ಹರಿವು ಹೆಚ್ಚಳ
ಶ್ರೀರಂಗಪಟ್ಟಣ: ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾಗಿದ್ದು, ಕಳೆದ ವಾರದಿಂದ ಹೆಚ್ಚಿನ ನೀರು ಹರಿದು ಬರುತ್ತಿದೆ.
ಕೊಡಗು, ಭಾಗಮಂಡಲದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಕೆಆರ್‌ಎಸ್ ಜಲಾಶಯಕ್ಕೆ ಕಾವೇರಿ ನದಿ ಮೂಲಕ ರವಿವಾರ ಸಂಜೆ 14 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು.
ಕೊಡಗಿನಲ್ಲೂ ಮಳೆ ಚುರುಕಾಗಿರುವುದರಿಂದ ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕಡಿಮೆ ಹಂತಕ್ಕೆ ಇಳಿಕೆಯಾಗಿದ್ದ ಜಲಾಶಯದ ನೀರಿನ ಮಟ್ಟ ಈಗ ಸುಧಾರಣೆಯಾಗುತ್ತಿದೆ. ಈಗ ರೈತರ ಮೊಗದಲ್ಲಿ ಸಂತಸ ಮೂಡುತ್ತಿದೆ. ಕಳೆದ 4 ದಿನಗಳಿಂದಲೂ ಒಳ ಹರಿವು ಪ್ರಮಾಣ ಹೆಚ್ಚಿದ್ದು, ಜಲಾಶಯದ ಮಟ್ಟ 109 ಅಡಿಗೆ ಏರಿಕೆ ಕಂಡು ಬಂದಿದೆ.
ಕೊಡಗಿನಲ್ಲಿ ಉತ್ತಮ ಮಳೆ: ವಿವಿಧೆಡೆ ಹಾನಿ
ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ ಯಾಗು ತ್ತಿದ್ದು ಕಿರು ತೊರೆ, ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದ ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿವೆ.