ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ (ಜು.04): ಮಳೆಗಾಲ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಅನೇಕ ಕಡೆಗಳಲ್ಲಿ ರೈತರ ಜಮೀನುಗಳಿಗೆ ತೆರಳುವ ರಸ್ತೆ ಹಾಳಾಗಿದ್ದು, ಕೂಡಲೇ ಸರಿ ಪಡಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ್ ನಗರದ ತಾಲೂಕ ಪಂಚಾಯತಿ ಕಛೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಾಮಾನ್ಯ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಜಮೀನುಗಳಿಗೆ ತೆರಳುವ ರಸ್ತೆಗಳಿಗೆ ಸಂಬಂಧಿಸಿದಂತೆ ಅನೇಕ ಹಳ್ಳಿಗಳ ಜನರು, ರೈತರು ಸಮಸ್ಯೆ ಹೇಳಿಕೊಂಡಿದ್ದಾರೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಎಸ್.ಎಮ್ ಕೃಷ್ಣ ನಗರದ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಜೆಸ್ಕಾಂನವರು ಕೂಡಲೇ ಅದನ್ನು ಸರಿಪಡಿಸಬೇಕು. ಗೋರನಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಐವತ್ತು ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದಾರೆ. ಈ ರೀತಿ ಪರಿಸ್ಥಿತಿ ಮುಂದುವರೆದರೆ ಕಷ್ಟವಾಗುತ್ತದೆ. ಸರಕಾರಿ ಶಾಲೆಗಳಲ್ಲಿನ ಕಲಿಕಾ ಗುಣಮಟ್ಟವನ್ನು ಹೇಗೆ ಸರಿ ಪಡಿಸಲು ಸಾಧ್ಯ ಎಂಬುದರ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ. ಇದೇ ರೀತಿ ನಿರ್ಲಕ್ಷ್ಯ ತಾಳಿದರೆ ಸರ್ಕಾರಿ ಶಾಲೆಗಳು ಬಾಗಿಲು ಹಾಕುವ ಪರಸ್ಥಿತಿ ಬರುತ್ತೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಬಹಳಷ್ಟು ಗಂಭೀರವಾಗಿ ಪರಿಗಣಿಸಬೇಕು.
ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿ ಬಹಳಷ್ಟು ಮಂದಗತಿಯಲ್ಲಿ ನಡೆಯುತ್ತಿದೆ. ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಆ ಬಗ್ಗೆ ಗಮನಹರಿಸಬೇಕು. ಚಿಕ್ಕ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆಹಾರ ನೀಡುವ ಕಡೆಗೆ ಅಂಗನವಾಡಿ ಅಧಿಕಾರಿಗಳು ಗಮನಹರಿಸಬೇಕು. ಸಮಾಜ ಕಲ್ಯಾಣ ಇಲಾಖೆಯು ಇಲಾಖೆಯ ವತಿಯಿಂದ ನಿರ್ಮಿಸಬೇಕಾಗಿರುವ ಸಮುದಾಯ ಭವನಗಳು ನಾಲ್ಕು ನಾಲ್ಕು ವರ್ಷಗಳಾದರು ಚಾಲನೆ ಸಿಗದಿದ್ದರೆ ಹೇಗೆ. ಅದರ ಬಗ್ಗೆ ನಮಗೆ ಮಾಹಿತಿ ನೀಡಬೇಕು.
ರೈತರ ಜಮೀನುಗಳಿಗೆ ತೆರಳುವ ರಸ್ತೆಯ ಸ್ಥಿತಿಗತಿಗಳ ಮಾಹಿತಿಯನ್ನು ಪ್ರತಿಯೊಂದು ಗ್ರಾಮ ಪಂಚಾಯತಿ ಪಿಡಿಒಗಳು ಹದಿನೈದು ದಿನಗಳ ಒಳಗೆ ನನಗೆ ನೀಡಬೇಕು. ವಿವಿಧ ಯೋಜನೆಯ ಫಲಾನುಭವಿಗಳಿಗೆ ಮನೆಗಳನ್ನು ನೀಡುವ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ಪಾತ್ರವೇನು.? ಶಾಸಕರ ಗಮನಕ್ಕೆ ತರದೇ ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆ ಮಾಡಬಹುದೇ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೃಷಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಲೋಕೋಪಯೋಗಿ, ಶಿಕ್ಷಣ, ಪಿಡಬ್ಲೂಡಿ, ಆರೋಗ್ಯ, ಪಶುಸಂಗೋಪನೆ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ತೋಟಗಾರಿಕೆ, ಸಣ್ಣ ನೀರಾವರಿ, ರೇಷ್ಮೆ, ಸಾಮಾಜಿಕ ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ಮಾಹಿತಿ ಹಂಚಿಕೊಂಡರು. ಬೀದರ್ ತಹಶಿಲ್ದಾರ್ ಅಣ್ಣರಾವ್ ಪಾಟೀಲ್, ಬೀದರ್ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ್ ಪಾಟೀಲ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅನುಷ್ಠಾನ ಅಧಿಕಾರಿಗಳು, ಪಿಡಿಒಗಳು ಸೇರಿದಂತೆ ಅನೇಕರಿದ್ದರು.