ವಾಟ್ಸಪ್ ಸ್ಟೇಟಸ್‌ಗಳಲ್ಲಿ ಸದ್ದು ಮಾಡುತ್ತಿದೆ ಈ ಪೋಸ್ಟ್: ಹಾಗಾದರೇ ಈ ಪೋಸ್ಟ್ನಲ್ಲಿ ಇರುವುದಾದರೂ ಏನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಯಚೂರು, ಜು.4: ಆಡಳಿತರೂಢ ಮತ್ತು ವಿರೋಧ ಪಕ್ಷಗಳಲ್ಲಿ ನಾಯಕ ಮತ್ತು ಕಾರ್ಯಕರ್ತರ ಮಧ್ಯೆ ಹೆಚ್ಚುತ್ತಿರುವ ಅಂತರ ಹಾಗೂ ಕಾರ್ಯಕರ್ತರಲ್ಲಿ ನಾಯಕರ ಬಗ್ಗೆ ಕುಸಿಯುತ್ತಿರುವ ವಿಶ್ವಾಸದಿಂದಾಗಿ ಆಯಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಆಪ್ತರ ಮುಂದೆ ಹೇಳಿಕೊಳ್ಳುವ ವೇದನೆ ಸಾಮಾಜಿಕ ಜಾಲತಾಣದ ಪೋಸ್ಟೊಂದು ಬಹುತೇಕ ಕಾರ್ಯಕರ್ತರ ಸ್ಟೇಟಸ್‌ನಲ್ಲಿ ಸದ್ದು ಮಾಡುತ್ತಿದೆ.
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಾತ್ರಿ, ಹಗಲು ಪಕ್ಷ ಮತ್ತು ಅಭ್ಯರ್ಥಿ ಪರ ಪ್ರಚಾರ ನಡೆಸಿ, ವಿರೋಕ್ಷ ಪಕ್ಷಗಳೊಂದಿಗೆ ಕೈ ಕೈ ಮಿಲಾಯಿಸಲು ಹಿಂಜರಿಯದೆ, ಕೋರ್ಟ್ ಕಛೇರಿ ಕಟ್ಟೆ ಹತ್ತಲು ಭಯಪಡದೆ, ನನ್ನ ಪಕ್ಷ ಮತ್ತು ನನ್ನ ನಾಯಕ ಗೆಲ್ಲಬೇಕೆಂದು ತುಡಿತದಲ್ಲಿ ಅವಿಶ್ರಾಂತವಾಗಿ ಕೆಲಸ ನಿರ್ವಹಿಸುವ ಕಾರ್ಯಕರ್ತ ಚುನಾವಣೆ ನಂತರ ತಮ್ಮ ನಾಯಕನ ಗೆಲುವಿನ ವಿಜಯೋತ್ಸವದ ಮಧ್ಯೆ ಕಳೆದು ಹೋಗುವ ಹಾಗೂ ತಮ್ಮಿಂದಲೇ ಚುನಾಯಿತಗೊಂಡ ವ್ಯಕ್ತಿಯ ನಿರ್ಲಕ್ಷ್ಯಗೆ ಗುರಿಯಾಗುವ ಅನೇಕ ಘಟನೆಗಳಿಂದ ಕಾರ್ಯಕರ್ತರ ಮಾನಸಿಕ ವೇದನೆಗೆ ಈ ಪೋಸ್ಟ್ ಪ್ರತೀಕವಾಗಿದೆ.
ಬಿಸಿ ಮುಟ್ಟಿಸುವಲ್ಲಿ ಸಾಮಾಜಿಕ ಜಾಲತಾಣ
ಸಂಸದರು, ಶಾಸಕರಾದ ನಂತರ ತಮ್ಮ ಪರ ಪ್ರಚಾರ ಮಾಡಿದ ಮತ್ತು ಗೆಲುವಿಗೆ ಆಧಾರ ಸ್ತಂಬವಾಗಿ ನಿಂತ ಕಾರ್ಯಕರ್ತರು ಮನೆಗೆ ಬಂದರೆ, ಕನಿಷ್ಟ ಗೌರವ ನೀಡದ ನಾಯಕರಿಂದ ತೀವ್ರ ಮುಜುಗರ ಮತ್ತು ಅಪಮಾನಕ್ಕೆ ಗುರಿಯಾಗುವ ಈ ಪೋಸ್ಟ್ ಬರಹ ಸಾಂತ್ವನವಾಗಿದೆ. ಅಧಿಕಾರ ಸಿಕ್ಕ ನಂತರ ಅಣ್ಣ, ತಮ್ಮ, ಮಗ ಹಾಗೂ ಕುಟುಂಬದ ಇನ್ನಿತರ ವ್ಯಕ್ತಿಗಳ ಜಾತಿಯ ಸಂಬಂಧಗಳು ಅಥವಾ ಶೇ.10, 20, 30 ಲಂಚ ಕೊಡುವ ಅಧಿಕಾರಿಗಳಿಗೆ ರೆಡ್ ಕ್ರಾಪೆಟ್ ಹಾಕುವ ಜನಪ್ರತಿನಿಧಿ (ನಾಯಕರು) ಗಳ ಮುಂದೆ ಕಿಮ್ಮತ್ತಿಲ್ಲದಂತೆ ನಿಲ್ಲುವ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ಈ ಪೋಸ್ಟ್ ಕಾರ್ಯಕರ್ತರ ಮಹತ್ವವನ್ನೆ ಸಾರುವ ಅಸ್ತ್ರವಾಗಿದೆ. ಜನಪ್ರತಿನಿ ಮತ್ತು ನಾಯಕರ ನಿರ್ಲಕ್ಷ್ಯಮುಂಬರುವ ದಿನಗಳಲ್ಲಿ ಅವರದ್ದೆ ಸೋಲಿಗೆ ಯಾವ ರೀತಿ ಕಾರಣವಾಗಲಿದೆ ಎನ್ನುವ ಮಾಹಿತಿ ನೀಡಿ ಪರೋಕ್ಷವಾಗಿ ಬಿಸಿ ಮುಟ್ಟಿಸುವಲ್ಲಿ ಸಾಮಾಜಿಕ ಜಾಲತಾಣದ ಈ ಪೋಸ್ಟ್ ಎಚ್ಚರಿಕೆಯ ಘಂಟೆಯಾಗಿದೆ.
ನಾಯಕರ ಮಲತಾಯಿ ಧೋರಣೆ
ನಮ್ಮ ನಾಯಕ, ನಮ್ಮ ಶಾಸಕ, ನಮ್ಮ ಸಂಸದ, ಸಚಿವ ಎಂಬ ಅಭಿಮಾನದೊಂದಿಗೆ ವಿರೋಧಿಗಳ ಮುಂದೆ ವಕಾಲತ್ತು ಮಾಡಿ, ತಮ್ಮ ಪಕ್ಷ ಮತ್ತು ತಮ್ಮ ನಾಯಕರ ಪರ ನಿಲ್ಲುವ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಸಂದರ್ಭದಲ್ಲಿ ನಾಯಕರು, ಜನಪ್ರತಿನಿಧಿಗಳು ತೋರುವ ನಿರ್ಲಕ್ಷ್ಯದಿಂದ ಅದೆಷ್ಟೋ ಕಾರ್ಯಕರ್ತರು ಅಧಿಕಾರದಿಂದ ವಂಚಿತಗೊಂಡು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುವಂತಹ ಆಪತ್ತಿಗೆ ಗುರಿಯಾಗುವವರಿಗೆ ಈ ಪೋಸ್ಟ್ ಒಂದು ಜಾಗೃತಿಯಾಗಿದೆ. ಚುನಾವಣೆಗಳಲ್ಲಿ ಗೆಲುವಿಗಾಗಿ ಕೆಲಸ ಮಾಡಿದವರನ್ನು ಹೊರಗಿಟ್ಟು, ನಂತರ ಒಂದಷ್ಟು ವಂತಿಕೆ ನೀಡುವ ಮತ್ತು ಇತರೆ ಸುಖದ ಸೌಲಭ್ಯಗಳಿಗೆ ನೆರವಾಗುವ ಜನರಿಗೆ ಮಣೆ ಹಾಕಿ, ಉನ್ನತ ಹುದ್ದೆಗಳಿಗೆ ನಾಮಕರಣಗೊಳಿಸುವ ನಾಯಕರ ಮಲತಾಯಿ ಧೋರಣೆಯಿಂದ ನಿರಂತರ ಅನ್ಯಾಯಕ್ಕೊಳಗಾದ ಜನರು ಈ ಪೋಸ್ಟ್ ಮೂಲಕ ತಮ್ಮ ಆಕ್ರೋಶವನ್ನು ತಮ್ಮ ನಾಯಕರಿಗೆ ತಿಳಿಸಲು ವಾಹಕವಾಗಿದೆ.
ನಾಯಕರೆ ಬದಲಾಗಿ, ಇಲ್ಲವಾದರೆ ಬದಲಾವಣೆ ಅನಿವಾರ್ಯ
ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಉಂಟಾದ ಈ ಅಂತರದ ಹಿನ್ನೆಲೆಯೋ ಅಥವಾ ಕಾರ್ಯಕರ್ತರಲ್ಲಿ ಮೂಡಿದ ಜಾಗೃತಿಯ ಪರಿಣಾಮವೋ? ಸಾಮಾಜಿಕ ಜಾಲತಾಣದ ಈ ಪೋಸ್ಟ್ ಈಗ ಬಹುತೇಕ ಕಾರ್ಯಕರ್ತರ ಸ್ಟೇಟಸ್ ಭಾಗವಾಗಿ ಕಾರ್ಯಕರ್ತ ಮಹತ್ವವನ್ನು ಹೇಳುವುದರೊಂದಿಗೆ ನಾಯಕರೆ ಬದಲಾಗಿ, ಇಲ್ಲವಾದರೆ ಬದಲಾವಣೆ ಅನಿವಾರ್ಯವಾಗುತ್ತದೆಂಬ ಎಚ್ಚರಿಕೆ ನೀಡುವ ಮಟ್ಟಕ್ಕೆ ಈ ಪೋಸ್ಟ್ ಕಾರ್ಯಕರ್ತರ ಪರ ಧ್ವನಿಯಾಗಿ ನಿಂತಿದೆ.
ಹಾಗಾದರೇ ಈ ಪೋಸ್ಟ್ನಲ್ಲಿ ಇರುವುದಾದರೂ ಏನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಒಬ್ಬ ಯಶಸ್ವಿ ನಾಯಕನ ಬೆಳವಣಿಗೆ ಹಿಂದೆ ಕಾರ್ಯಕರ್ತನ ಶ್ರಮವಿರುತ್ತದೆ. ನಾಯಕನಾದವನು ಇದನ್ನು ಅರ್ಥಮಾಡಿಕೊಂಡು ನಡೆಯಬೇಕು. ತನಗಾಗಿ ಶ್ರಮಿಸಿದವರಿಗೆ ತಾನು ಆಶ್ರಯವಾಗಿ ನಿಲ್ಲಬೇಕು. ಅವರನ್ನು ಕಾಲು ಕಸದಂತೆ ಬಳಸಿ ಬೀಸಾಡಬಾರದು. ಏಕೆಂದರೆ ಎಷ್ಟೋ ಆಶಯಗಳನ್ನು ಇಟ್ಟಿಕೊಂಡು ತಮ್ಮ ಬೆಂಬಲಕ್ಕೆ ನಿಂತಿದ್ದಾರೋ? ಅವರ ಆಶಯಗಳಿಗೆ ತಣ್ಣೀರು ಎರಚಿದ್ದೆಯಾದರೆ, ತಮಗೂ ಮುಂದೆ ಕಾಪಾಡುವ ಆ ಕೈ ವಿಷ ಸರ್ಪವಾಗಿ ಕಚ್ಚದೆ ಬಿಡದು ಎಂಬ ತಿಳುವಳಿಕೆ ಇರಬೇಕು. ನಾಯಕರೆ ಬದಲಾಗಿ, ಇಲ್ಲದಿದ್ದರೆ ಬದಲಾವಣೆ ಅನಿವಾರ್ಯವಾಗುತ್ತದೆ ಅಷ್ಟೆ ಎನ್ನುವುದು ಈ ಪೋಸ್ಟ್ನ ಬರಹವಾಗಿದೆ.