‘ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ’ ಕಾನೂನಿನ ಮುಂದೆ ಎಲ್ಲರೂ ಒಂದೇ. ಅಮೃತ್ ಪೌಲ್ ಬಂಧನವೇ ಇದಕ್ಕೆ ಸಾಕ್ಷಿ: ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ಇದೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಬಂಧನವಾಗಿದ್ದು, ರಾಜ್ಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.
ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನ ಸೋಮವಾರ ಸಿಐಡಿ ಬಂಧಿಸಿದ್ದು, ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ.ರೂಪಾ, ‘ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ’ ಎಂದು ಮಾಡಿರುವ ಟ್ವೀಟ್ ಕುತೂಹಲ ಮೂಡಿಸಿದೆ.
‘ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳುತ್ತಿದ್ದರು. ಆದರೆ ಆ ಮಾತು ಸುಳ್ಳು. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಬಂಧನವೇ ಇದಕ್ಕೆ ಸಾಕ್ಷಿ. ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನವಾದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆ’ ಎಂದು ರೂಪಾ ಟ್ವೀಟ್ ಮಾಡಿದ್ದಾರೆ.
ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳ್ತಾ ಇದ್ದದ್ದು ಸುಳ್ಳು ಅಂತ ಇಂದಿನ ಮೊತ್ತ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿ ಹುದ್ದೆಯ ಐಪಿಎಸ್ ಅಧಿಕಾರಿ ಬಂಧನ ಸಾಕ್ಷಿ. ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನ ಆದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆ. https://t.co/l5hYTVQDTT
— D Roopa IPS (@D_Roopa_IPS) July 4, 2022
ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ಆರಂಭದಲ್ಲೇ ದಟ್ಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರೇ ಡೀಲ್ ಕುದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಮೊದಲ ತಲೆದಂಡ ಎಂಬಂತೆ ಏ.27ರಂದೇ ಅಮೃತ್ ಪೌಲ್ ಅವರನ್ನ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಇದೇ ಪ್ರಕರಣ ಸಂಬಂಧ ಈ ಹಿಂದೆ ಮೂರು ಬಾರಿ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು. ಇಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾದಾಗ ಸಿಐಡಿ ಬಂಧಿಸಿದೆ. ಇವರನ್ನ 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿದ್ದು, ವಿಚಾರಣೆಯಲ್ಲಿ ಮತ್ತಷ್ಟು ದೊಡ್ಡವರ ಹೆಸರು ಹೊರಬರುವ ಸಾಧ್ಯತೆ ಇದೆ.