Mandya Crime News: ಕೆಲ ವರ್ಷಗಳಿಂದ ಸೈಲೆಂಟಾಗಿದ್ದ ಸಕ್ಕರೆನಾಡು ಮಂಡ್ಯ (Mandya) ಈಗ ವೈಲಂಟ್ ಆಗ್ತಿದೆ. ಮಂಡ್ಯದಲ್ಲಿ ಬ್ಯಾಕ್ ಟೂ ಬ್ಯಾಕ್ ಕೊಲೆಗಳು; ಬೆಚ್ಚಿಬಿದ್ದ ಜಿಲ್ಲೆಯ ಜನರು

ಮಂಡ್ಯದಲ್ಲಿ ಬ್ಯಾಕ್ ಟೂ ಬ್ಯಾಕ್ ಕೊಲೆಗಳು
ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಅಪರಾಧ ಪ್ರಕರಣ ಹೆಚ್ಚಾಗಿದ್ದು, ಅದರಲ್ಲಿ ಸುಮಾರು 6ಕ್ಕೂ ಹೆಚ್ಚು ಬರ್ಬರ ಹತ್ಯೆಗಳು ನಡೆದಿವೆ. ಜೂನ್ 7 ರಂದು ಮಂಡ್ಯದ ಪಾಂಡವಪುರದ ಬೇಬಿ ಗ್ರಾಮದ ಬಳಿ ನಾಲೆಯೊಂದರಲ್ಲಿ ಮಹಿಳೆಯೊಬ್ಬಳ ಸೊಂಟದ ಕೆಳಗಿನ ಅರ್ಧ ಭಾಗದ ಮೃತ ದೇಹ ಪತ್ತೆಯಾಗಿತ್ತು.
ಮತ್ತೊಂದು ಕಡೆ ಅದೇ ದಿನ ಶ್ರೀರಂಗಪಟ್ಟಣದ ಮಹದೇವಪುರದ ಬಳಿ ಕಾವೇರಿ ನದಿಯಲ್ಲಿ ಮಹಿಳೆಯೊಬ್ಬಳ ಸೊಂಟದ ಕೆಳಗಿನ ಮೃತ ದೇಹ ಪತ್ತೆಯಾಗಿತ್ತು. ಹೀಗೆ ಒಂದೆ ದಿನ ಒಂದೆ ರೀತಿ ಹತ್ಯೆ ನಡೆದಿರುವ ಮಹಿಳೆಯರ ಮೃತ ದೇಹ ಪತ್ತೆಯಾಗಿದ್ದ ವಿಚಾರ ಗೊತ್ತಾಗ್ತಿದ್ದಂತೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ರು.
ಹಳೆ ದ್ವೇಷಕ್ಕೆ ರೌಡಿಶೀಟರ್ ಅರುಣನ ಹತ್ಯೆ
ಇನ್ನು ಮಹಿಳೆಯರ ಮೃತ ದೇಹ ಪತ್ತೆಯಾದ ವಿಚಾರ ಮಾಸುವ ಮುನ್ನವೇ ಈಶ್ವರನಿಗೆ ಕೈಮುಗಿಯಲು ದೇವಸ್ಥಾನಕ್ಕೆ ಹೋಗಿದ್ದ ರೌಡಿ ಅರುಣನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತದನಂತರ ಮಂಡ್ಯದ ತೂಬಿನಕೆರೆ ಬಳಿ ಜಗಳವಾಡ್ತಿದ್ದ ಯುವಕರಿಗೆ ರೈತ ಶಂಕರೇಗೌಡ ಎಂಬಾತ ಬುದ್ದಿವಾದ ಹೇಳಿದ್ದರು.
ಆದ್ರೆ ಬುದ್ದಿ ಮಾತು ಹೇಳಿದ ಶಂಕರೇಗೌಡರ ವಿರುದ್ಧವೇ ತಿರುಗಿಬಿದ್ದ ಯುವಕರು ನಡು ರಸ್ತೆಯಲ್ಲಿ ರೈತ ಶಂಕರೇಗೌಡ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಕೆಆರ್‌ಎಸ್ ನ ಸುಂದರ್ ರಾಜ್, ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸುನೀಲ್ ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ರೌಡಿ ಪೆರೇಡ್, ತಡರಾತ್ರಿ ರೌಡಿಶೀಟರ್ ಮನೆಗೆ ಎಂಟ್ರಿ ಕೊಟ್ಟರು ಕಡಿಮೆ ಆಗ್ಲಿಲ್ಲ ಕ್ರೈಂ
ಇನ್ನು ಜಿಲ್ಲೆಯಲ್ಲಿ ಹತ್ಯೆ ಪ್ರಕರಣಗಳು ಹೆಚ್ಚಾಗ್ತಿದ್ದಂತೆ ಎಚ್ಚೆತ್ತ ಮಂಡ್ಯ ಪೊಲೀಸರು ರೌಡಿಗಳನ್ನ ಮಟ್ಟ ಹಾಕಲು ಪ್ಲಾನ್ ಮಾಡಿದ್ರು. ಅದ್ರಂತೆ ರೌಡಿ ಪೆರೇಡ್ ನಡೆಸಿ ಬಳಿಕ ರೌಡಿಶೀಟರ್ ಗಳ ಮನೆಗೆ ತಡರಾತ್ರಿ ಎಂಟ್ರಿಕೊಟ್ರು. ಇನ್ಮುಂದೆ ಅಪರಾಧ ಪ್ರಕರದಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಿದ್ರು.
ಆದ್ರೆ ಇದೆಲ್ಲಾ ನಡೆದ ಬಳಿಕವು ಮಂಡ್ಯದಲ್ಲಿ ಕ್ರೈಮ್ ಪ್ರಕರಣ ಹೆಚ್ಚಾಗಿದೆ. ಇದ್ರಿಂದ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದು, ಮಂಡ್ಯದಲ್ಲಿ ಮತ್ತೆ ರೌಡಿಸಂ ತಲೆ ಎತ್ತಲಿದೆ ಎಂದು ಮಾತನಾಡಿಕೊಳ್ತಿದ್ದಾರೆ.