ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ, ಬಿಟ್ಟು ಹೋಗಿದ್ದ ಮಗು ಬಳಿಗೆ ಮತ್ತೆ ಬಂದ ಮಹಾ ತಾಯಿ..

ಕೊಳ್ಳೇಗಾಲ: ಅಕ್ರಮ ಸಂಬಂಧ, ಹೆಣ್ಣು ಮಗು ಎಂಬ ನಿರ್ಲಕ್ಷ್ಯ ಧೋರಣೆ, ಸಾಕಲಾಗದ ಪರಿಸ್ಥಿತಿ, ಅಂಗವಿಕಲ ಮಗು..ಇತರ ಕಾರಣಗಳಿಂದಾಗಿ ಹೆತ್ತ ತಾಯಿಯೇ ತನ್ನ ಕರುಳ ಬಳ್ಳಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವ ಪ್ರಕರಣಗಳು ಜಿಲ್ಲೆಯಲ್ಲಿ ಹಿಂದಿನಿಂದಲೂ ಮುಂದುವರೆದಿವೆ.
ಆದರೆ ಇಲ್ಲೊಂದು ಪ್ರಕರಣದಲ್ಲಿ ಮಗುವನ್ನು ಬಸ್ ನಿಲ್ದಾಣದಲ್ಲಿ ಇಟ್ಟು ಹೋಗಿದ್ದ ತಾಯಿ ಮರಳಿ ಸ್ಥಳಕ್ಕೆ ಬಂದಿದ್ದಾಳೆ. ಹಾಗೆಂದು ಇವಳಿಗೆ ಮಗು ಸಾಕುವ ಆಸಕ್ತಿ ಇದೆ ಎಂದು ಭಾವಿಸುವಂತಿಲ್ಲ.
ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಸೋಮವಾರ ಮುಂಜಾನೆ ಹುಟ್ಟಿದ ಎರಡು ದಿನದ ಗಂಡು ಪತ್ತೆಯಾಗಿತ್ತು. ಮಗುವನ್ನು ಬಟ್ಟೆಯಿಂದ ಸುತ್ತಿ ಬಸ್ ನಿಲ್ದಾಣ ಸಮೀಪ ಕಸದ ರಾಶಿ ಬಳಿ ಇಡಲಾಗಿತ್ತು.
ಇದನ್ನು ಸ್ಥಳೀಯರು ನೋಡಲಾಗಿ ನವಜಾತ ಶಿಶು ಕಂಡು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಗ್ರಾಮದ ಮಹಿಳೆ ತಾನು ಮಗುವಿನ ತಾಯಿ ಎಂದು ಹೇಳಿ ಸ್ಥಳಕ್ಕೆ ಬಂದಿದ್ದಾಳೆ.
ಪೊಲೀಸರು ಆಕೆಯನ್ನು ವಿಚಾರಿಸಿದಾಗ ತನಗೆ ಮದುವೆ ಆಗಿದೆ. ಗಂಡ ಬಿಟ್ಟು ಹೋಗಿದ್ದಾನೆ. ನನಗೆ ಮಗು ಸಾಕೋ ಆಸಕ್ತಿ ಇಲ್ಲ ಎಂದು ಹೇಳಿದ್ದಾಳೆ. ಈಕೆಯ ಕಥೆ ಕೇಳಿದ ಪೊಲೀಸರು ಮಗುವಿಗೆ ತೊಂದರೆ ಕೊಡಬೇಡ. ಕಾನೂನು ಪ್ರಕಾರ ಬೇರೆಯವರಿಗೆ ದತ್ತು ಕೊಡಿಸಲಾಗುವುದು ಎಂದು ಬುದ್ಧಿವಾದ ಹೇಳಿ ಮಗುವನ್ನು ಮರಳಿ ಆಕೆಯ ಮಡಿಲಿಗೆ ಇಟ್ಟು ಬಂದಿದ್ದಾರೆ.
ಈಕೆಗೆ ಮದುವೆಯೇ ಆಗಿರಲಿಲ್ಲ. ಬೆಂಗಳೂರಿನಲ್ಲಿ ಇದ್ದವಳು ಕೆಲ ದಿನಗಳ ಹಿಂದಷ್ಟೇ ಊರಿಗೆ ಬಂದಳು. ಅಕ್ರಮ ಸಂಬಂಧಕ್ಕೆ ಜನಿಸಿದ ಮಗುವನ್ನು ಬಸ್ ನಿಲ್ದಾಣದಲ್ಲಿ ಇಟ್ಟು ಹೋಗಿದ್ದಾಳೆ ಎಂದು ಗ್ರಾಮದ ಕೆಲವರು ಹೇಳುತ್ತಿದ್ದು, ಮಗು ಹುಟ್ಟಿಗೆ ಕಾರಣಗಳೇನೇ ಇದ್ದರೂ ಅದರ ಪರಿಸ್ಥಿತಿ ನೆನೆದು ಮಕ್ಕಳಿಲ್ಲದವರಿಗೆ ಕರುಳು ಕೊರೆಯುತ್ತಿದೆ. ಮಡಿಲು ಮಿಡಿಯುತ್ತಿದೆ.