ಪಿಎಸ್ಐ ಗೋಲ್ಮಾಲ್; ಆರೋಪ ಪಟ್ಟಿಯಲ್ಲಿ ಡೀಲ್ನ ಇಂಚಿಂಚು ವಿವರ..

ಬೆಂಗಳೂರು/ಕಲಬುರಗಿ: ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಸ್ಐಗಳ ಮೊದಲ ನೇಮಕ ಪ್ರಕ್ರಿಯೆಯಲ್ಲಿ ಅಮೃತ್ ಪೌಲ್ ಆಕಾಂಕ್ಷಿಗಳ ಎಲ್ಲ ವಿವರಗಳನ್ನು ತಿಳಿದ ಬಳಿಕವೇ ಡೀಲ್ ಓಕೆ ಮಾಡುತ್ತಿದ್ದರು….! ಸಿಐಡಿ ವಿಚಾರಣೆಯಲ್ಲಿ ಪೌಲ್ ಆಪ್ತರು ಹಾಗೂ ಅಕ್ರಮಕ್ಕೆ ನೆರವಾದವರು ತೆರೆದಿಟ್ಟ ಸತ್ಯವಿದು ಎನ್ನುತ್ತಿವೆ ತನಿಖಾ ಮೂಲಗಳು.
ಡೀಲ್ ಕುದುರಿದ ಬಳಿಕ ವಸೂಲಿಯಾದ ಹಣದಲ್ಲಿ ಪಾಲು ಪಡೆದಿರುವುದು ಸಹ ತನಿಖೆಯಲ್ಲಿ ಸಾಬೀತಾಗಿದೆ.
ಇನ್ನೊಂದೆಡೆ, ಸಬ್ ಇನ್ಸ್ಪೆಕ್ಟರ್ ನೇಮಕ ಸಂಬಂಧ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಬ್ಲೂಟೂತ್ ಬಳಸಿ ಉತ್ತರ ಹೇಳಿಕೊಡಲಾಗಿತ್ತು. ಉತ್ತೀರ್ಣರಾಗಲು ಬೇಕಾಗಿದ್ದ ಅಂಕಗಳಿಗಾಗಿ ಓಎಂಆರ್ ಶೀಟ್ಗಳನ್ನು ತಿದ್ದಿರುವ ವಿಚಾರ ಸಿಐಡಿ ತನಿಖೆಯಲ್ಲಿ ದೃಢಪಟ್ಟಿದ್ದು, 34 ಆರೋಪಿಗಳ ವಿರುದ್ಧ ಕಲಬುರ್ಗಿ ಕೋರ್ಟ್ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.
ಕಲಬುರ್ಗಿ ಪರೀಕ್ಷಾ ಕೇಂದ್ರದ ಅಕ್ರಮಕ್ಕೆ ಸೀಮಿತವಾಗಿ 1900 ಪುಟಗಳ ಜಾರ್ಜ್ಶೀಟ್ ಸಲ್ಲಿಕೆಯಾಗಿದೆ. ಹಗರಣದ ಕಿಂಗ್ಪಿನ್ಗಳು, ಪೊಲೀಸರು, ಸಹಾಯ ಮಾಡಿದವರು, ಪರೀಕ್ಷಾ ಕೇಂದ್ರದವರ ಕುರಿತು ನಡೆಸಿರುವ ತನಿಖೆಯ ಸಮಗ್ರ ವರದಿ ಇದಾಗಿದೆ. ಬ್ಲೂಟೂತ್ ಬಳಸಿ ಮತ್ತು ಓಎಂಆರ್ ಶೀಟ್ಗಳ ತಿದ್ದುಪಡಿ ಮೂಲಕ ಅಕ್ರಮ ಮಾಡಲಾಗಿತ್ತು. ಈ ಕುರಿತು ಏಪ್ರಿಲ್ 9 ರಂದು ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ, ಡಿವೈಎಸ್ಪಿ ಪ್ರಕಾಶ ರಾಠೋಡ್, ಶಂಕರಗೌಡ ಪಾಟೀಲ್ ಮತ್ತು ತಂಡ ನಾಲ್ಕು ತಿಂಗಳಿಂದ ನಿರಂತರ ತನಿಖೆ ನಡೆಸಿ ಹತ್ತಾರು ದಾಖಲೆ, ಸಾಕ್ಷಿಗಳನ್ನು ಸಂಗ್ರಹಿಸಿತ್ತು.
ಐವಾನ್-ಇ-ಶಾಹಿಯಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲೇ ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಚಾರ್ಜ್ಶೀಟ್ ಸಿದ್ಧಪಡಿಸಿದ್ದರು. ಜೆಎಂಎಫ್ಸಿ 3ನೇ ಕೋರ್ಟ್ ನ್ಯಾಯಾಧೀಶ ಕೆ.ಆರ್.ಶ್ರೀನಿವಾಸ ಅವರಿಗೆ ಸಿಐಡಿ ಪರ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಕಡತಗಳನ್ನು ಸಲ್ಲಿಸಿದರು.
ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಅಭ್ಯರ್ಥಿ ವೀರೇಶ ಎಂಬಾತನ ವಿರುದ್ಧ ಏ.9ರಂದು ಚೌಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಈಗ ಜಾರ್ಜ್ಶೀಟ್ ಸಲ್ಲಿಕೆಯಾಗಿದೆ. ಉಳಿದಂತೆ ಸ್ಟೇಷನ್ ಬಜಾರ ಠಾಣೆಯ ಎರಡು ಕೇಸ್ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಅವುಗಳ ಜಾರ್ಜ್ಶೀಟ್ ಮುಂದಿನ ದಿನಗಳಲ್ಲಿ ಸಲ್ಲಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
34 ಜನರ ವಿರುದ್ಧ ಆರೋಪ: ಪಿಎಸ್ಐ ನೇಮಕ ಪರೀಕ್ಷೆ ಕಿಂಗ್ಪಿನ್ಗಳಾದ ಆರ್.ಡಿ. ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ್, ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಂಜುನಾಥ ಮೇಳಕುಂದಿ, ಅಮಾನತುಗೊಂಡಿರುವ ಡಿವೈಎಸ್ಪಿಗಳಾದ ಮಲ್ಲಿಕಾರ್ಜುನ ಸಾಲಿ, ವೈಜನಾಥ ರೇವೂರ, ಸೊಲ್ಲಾಪುರದ ಉದ್ಯಮಿ ಸುರೇಶ ಕಾಟೇಗಾಂವ್, ಪೋಲೀಸ್ ಪೇದೆಗಳಾದ ಹಯ್ಯಾಳಿ ದೇಸಾಯಿ, ರುದ್ರಗೌಡ, ಶರಣಬಸವ, ಅಕ್ರಮ ನಡೆದ ಜ್ಞಾನಜ್ಯೋತಿ ಶಾಲೆ ಅಧ್ಯಕ್ಷ ರಾಜೇಶ ಹಾಗರಗಿ, ಮುಖ್ಯ ಶಿಕ್ಷಕ ಕಾಶೀನಾಥ ಚಿಲ್, ಶಿಕ್ಷಕರಾದ ಸಾವಿತ್ರಿ, ಸುಮಾ, ಸಿದ್ದಮ್ಮ, ಶಹಾಬಾದ್ ಪುರಸಭೆ ಉದ್ಯೋಗಿ ಜ್ಯೋತಿ ಪಾಟೀಲ್, ಆಯ್ಕೆಯಾಗಿದ್ದ ಅಭ್ಯರ್ಥಿಗಳಾದ ವೀರೇಶ, ಚೇತನ ನಂದಗಾಂವ, ಅರುಣಕುಮಾರ, ಶಾಂತಿಬಾಯಿ ಬಸ್ಯಾ ನಾಯಕ, ಅಸ್ಲ್ಲಾಂ ಮುಜುವಾರ, ಪ್ರಕರಣದಲ್ಲಿ ಸಹಾಯ ಮಾಡಿ ಭಾಗಿಯಾಗಿರುವ ಕಾಳಿದಾಸ, ಆನಂದ, ವಸಂತಕುಮಾರ ಸೇರಿ 34 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ವ್ಯಾಪಾರ ಶುರುವಿಟ್ಟುಕೊಂಡರು: 2020ರ ಫೆ.2ರಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಮೃತ್ ಪೌಲ್ ಅಧಿಕಾರ ವಹಿಸಿಕೊಂಡಿದ್ದರು. ಕೋವಿಡ್ ಲಾಕ್ಡೌನ್ ತೆರವಾದ ನಂತರ 2021ರ ಫೆ.22ಕ್ಕೆ 545 ಎಸ್ಐ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದ ಡಿವೈಎಸ್ಪಿ ಶಾಂತಕುಮಾರ್ ಡೀಲ್ ಕುರಿತು ಎಡಿಜಿಪಿ ಬಳಿ ಪ್ರಸ್ತಾಪಿಸಿದ್ದ. ಅದಕ್ಕೆ ಎಡಿಜಿಪಿ ಗ್ರೀನ್ ಸಿಗ್ನಲ್ ತೋರಿಸುತ್ತಿದಂತೆ ತನ್ನ ಕೆಳಹಂತದ ಆರ್ಎಸ್ಐ ಲೋಕೇಶಪ್ಪ, ಎಸ್ಐ ಲೋಕೇಶ್, ಹೆಡ್ ಕಾನ್ಸ್ಟೇಬಲ್ ಲೋಕೇಶ್, ಎಸ್ಡಿಎ ಹರ್ಷ, ಎಫ್ಡಿಎ ಶ್ರೀಧರ್ ಗ್ಯಾಂಗ್ ಕಟ್ಟಿಕೊಂಡು ಪ್ಲಾಯನ್ ಮಾಡಿದ್ದ. ಪ್ರತಿಯೊಂದು ವಿಚಾರವನ್ನು ಎಡಿಜಿಪಿ ಪೌಲ್ ಬಳಿ ರ್ಚಚಿಸಿದ ನಂತರವೇ ಡೀಲ್ಗಳು ನಡೆಯುತ್ತಿದ್ದವು.
ಖಾಸಗಿ ಏಜೆಂಟ್ಗಳು, ರಾಜಕೀಯ ಹಿನ್ನೆಲೆಯುಳ್ಳವರು ಮತ್ತು ಕೆಲ ಪೊಲೀಸರೇ ದಲ್ಲಾಳಿ ಸ್ಥಾನದಲ್ಲಿ ನಿಂತು ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಅಧಿಕಾರಿಗಳೊಂದಿಗೆ ಕೈ ಜೋಡಿಸಿದರು. ಒಂದು ಹುದ್ದೆಗೆ 60 ರಿಂದ 1 ಕೋಟಿ ರೂ. ವರೆಗೂ ಡೀಲ್ ಕುದುರಿಸಿ ಒಂದು ಕಂತಿನಲ್ಲಿ ಹಣ ಸಹ ಪಡೆದಿದ್ದರು. ಪಿಎಸ್ಐ ಹುದ್ದೆ ಆಕಾಂಕ್ಷಿಗಳು ಸಾಲ, ಆಸ್ತಿ ಮಾರಾಟ ಮಾಡಿ ಮತ್ಯಾವುದೋ ರೂಪದಲ್ಲಿ ಹಣ ತಂದು ಏಜೆಂಟ್ಗಳ ಮೂಲಕ ಉನ್ನತ ಅಧಿಕಾರಿಗಳಿಗೆ ತಲುಪಿಸಿದ್ದರು. ಪರೀಕ್ಷಾ ಕೇಂದ್ರದಲ್ಲೇ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬರೆಯಲು ಮತ್ತು ಅವರಿಗೆ ಬೇಕಾದ ಅಭ್ಯರ್ಥಿ ಪಕ್ಕದಲ್ಲೇ ಕೂರುವಂತೆ ಪ್ರವೇಶ ಪತ್ರ ಸಿದ್ದಪಡಿಸಿದ್ದರು. 2021ರ ಅ.3ರಂದು ರಾಜ್ಯದ 90 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿದ್ದರು. 2022ರ ಜ.19ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಸಹ ಪ್ರಕಟ ಮಾಡಿದ್ದರು. ತಮ್ಮ ಡೀಲ್ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರನ್ನು ತಾತ್ಕಾಲಿಕ ಪಟ್ಟಿಯಲ್ಲಿ ಬರುವಂತೆ ಮಾಡಿ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು. ಎಡಿಜಿಪಿ ಅಮೃತ್ ಪೌಲ್ ಅಧಿಕಾರ ವ್ಯಾಪ್ತಿಯಲ್ಲಿಯೇ ಎಲ್ಲ ಅಕ್ರಮ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪರಿವೀಕ್ಷಕರು ಬುಕ್ ಆಗಿದ್ದರು: ಲಿಖಿತ ಪರೀಕ್ಷೆ ನಡೆಯುವ ಕೊಠಡಿಗೆ ತಮಗೆ ಬೇಕಾದ ಪರಿವೀಕ್ಷಕರನ್ನೇ ನೇಮಕ ಮಾಡಿಕೊಂಡು ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಬ್ಲೂಟೂತ್ ಬಳಕೆಗೆ ಅಥವಾ ಉತ್ತರ ಹೇಳಿಕೊಡುವುದು. ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಸೀಲ್ ಮಾಡುವುದು. ಇಲ್ಲವಾದರೇ ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯನ್ನು ಬರೆದು ದಾಖಲೆ ಮಾಡದೆ ನಿರ್ಲಕ್ಷ್ಯ ತೊರುವ ಮೂಲಕ ಅಕ್ರಮಕ್ಕೆ ದಾರಿ ಮಾಡಿಕೊಡುವಂತೆ ಪರಿವೀಕ್ಷಕರಿಗೆ ಸೂಚನೆ ನೀಡಲಾಗಿತ್ತು.
ಎಸಿಬಿಯ ಒಬ್ಬ ಎಸ್ಪಿ ಕೇಡರ್ ಅಧಿಕಾರಿಗೆ 50 ಲಕ್ಷ ರೂ. ಹಣ ಕೊಟ್ಟವರು ಯಾರು? ಯಾರು ತೆಗೆದುಕೊಂಡು ಹೋಗಿ ಕೊಟ್ಟವರು? ಎಲ್ಲಿಂದ, ಯಾರಿಂದ ಹಣ ಪಡೆದರು ಎನ್ನುವ ಮಾಹಿತಿ ಬೇಕೆ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಪಿಎಸ್ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸವಾಲು ಹಾಕಿದರು.
ಹಗರಣದಲ್ಲಿ ಕಿಂಗ್ಪಿನ್ ಬೇರೆ ಇದ್ದಾರೆ. ಅವರನ್ನು ಮೊದಲು ಬಂಧಿಸಿ. ಸಣ್ಣ ಪುಟ್ಟ ಮೀನು ಹಿಡಿಯಬೇಡಿ ಅಂದಿದ್ದೆ. ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತ ಬಂದಿದ್ದೇನೆ. ಎಲ್ಲ ಮಾಹಿತಿ ಪಡೆದ ನಂತರವೇ ಚರ್ಚೆ ಮಾಡೋದು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಿಸಿ ಕ್ಯಾಮರಾ ಆಫ್ ಮಾಡಿ ಅಕ್ರಮ: ಲಿಖಿತ ಪರೀಕ್ಷೆ ಪತ್ರಿಕೆ-1ರಲ್ಲಿ 50 ಅಂಕ ಮತ್ತು ಪತ್ರಿಕೆ-2ರಲ್ಲಿ 150 ಅಂಕಗಳಿಗೆ ನಡೆದಿದೆ. ಸಹಜವಾಗಿಯೇ ಹೆಚ್ಚು ಅಂಕ ಪಡೆದವರು ಹುದ್ದೆ ಗಿಟ್ಟಿಸುತ್ತಿದ್ದರು. ಪತ್ರಿಕೆ-1ರಲ್ಲಿ 50ಕ್ಕೆ ಪ್ರಬಂಧ (20 ಅಂಕ), ಸಾರಾಂಶ ಬರಹ (10 ಅಂಕ), ಭಾಷಾಂತರಕ್ಕೆ (20 ಅಂಕ) ನಿಗದಿ ಮಾಡಲಾಗಿತ್ತು. ಮೊದಲ ಪತ್ರಿಕೆಯಲ್ಲಿ ಬರೆಯಲು ಬರುವುದಿಲ್ಲ ಎಂದಾದರೆ ಪತ್ರಿಕೆ-2ನಲ್ಲಿ ಹೆಚ್ಚು ಅಂಕ ಬರುವಂತೆ ಮಾಡಿದ್ದರು. ಅಧಿಕಾರಿಗಳ ಸೂಚನೆ ಮೇರೆಗೆ ಅಭ್ಯರ್ಥಿಗಳು, ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದರು. ಪರೀಕ್ಷಾ ಕೇಂದ್ರದಲ್ಲಿಯೇ ಸೀಲ್ ಮಾಡುವ ಮೊದಲು ಸಿಸಿ ಕ್ಯಾಮರಾ ಆಫ್ ಮಾಡಿ ಒಎಂಆರ್ ಶೀಟ್ ತಿದ್ದಿ ಹೆಚ್ಚಿನ ಅಂಕ ಬರುವಂತೆ ಮಾಡಿದ್ದರು. ಕೇಂದ್ರದಲ್ಲಿ ಸಾಧ್ಯವಾಗದೆ ಇದ್ದಾಗ ಅರಮನೆ ರಸ್ತೆ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ೆ ಒಎಂಆರ್ ಶೀಟ್ ಬಂದಾಗ ಸ್ವತಃ ಎಡಿಜಿಪಿ ಅವರೇ ಬೀಗದ ಕೀಯನ್ನು ಡಿವೈಎಸ್ಪಿ ಶಾಂತಕುಮಾರ್ಗೆ ಕೊಟ್ಟು ಸಿಸಿ ಕ್ಯಾಮರಾ ಆಫ್ ಮಾಡಿ ಬೆಳಗಿನ ಜಾವ ಒಎಂಆರ್ ಶೀಟ್ ತಿದ್ದಿಸಿದ್ದರು.
ಚಾರ್ಜ್ಶೀಟ್ ಮುಖ್ಯಾಂಶಗಳು
- ಕಲಬುರ್ಗಿ ಪರೀಕ್ಷಾ ಕೇಂದ್ರದ ಅಕ್ರಮ ಉಲ್ಲೇಖ
- ಬ್ಲೂಟೂತ್ ಬಳಕೆ ಸಾಬೀತು
- ಓಎಂಆರ್ ಶೀಟ್ ತಿದ್ದಿದ್ದು ಪತ್ತೆ
- ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರದ ಉಲ್ಲೇಖ
- 1,900 ಪುಟಗಳ ದೋಷಾರೋಪ ಪಟ್ಟಿ
- ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಸಿಬ್ಬಂದಿ ಭಾಗಿ
- ಡೀಲ್ ಅಭ್ಯರ್ಥಿಗಳಿಗೆ ಪರಿವೀಕ್ಷಕರಿಂದಲೂ ನೆರವು
- ಅಕ್ರಮ ನಡೆಸಲೆಂದೇ ಪರೀಕ್ಷಾ ಕೇಂದ್ರ ಗುರುತು
- 15ಕ್ಕೂ ಹೆಚ್ಚು ಕಡತಗಳು ನ್ಯಾಯಾಲಯಕ್ಕೆ ಸಲ್ಲಿಕೆ