ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟನೆ: ಭಾರತದಲ್ಲಿರುವ ಮಾಧ್ಯಮ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ: ಜಿಲ್ಲಾಧಿಕಾರಿ ನಿತೇಶ ಪಾಟೀಲ್

ಬೆಳಗಾವಿ: ಡಿಜಿಟಲ್ ಮಾಧ್ಯಮದಿಂದಾಗಿ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಕೂಡ ಮಾಧ್ಯಮ ತಲುಪುವಂತಾಗಿದೆ. ಹಾಗಾಗಿ ತಾಂತ್ರಿಕತೆಯನ್ನು ಬಳಸಿಕೊಂಡು, ಡಿಜಿಟಲ್ ಮಾಧ್ಯಮವನ್ನು ಪೂರಕವಾಗಿ ತೆಗೆದುಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಕರೆ ನೀಡಿದರು.
ಬೆಳಗಾವಿಯಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಉದ್ಘಾಟಿಸಿ ಮಾತನಾಡಿದರು.
ತಪ್ಪು ಮಾಡಿದವರ ಕಿವಿ ಹಿಂಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಿದೆ. ಭಾರತದಲ್ಲಿರುವಷ್ಟು ಸ್ವಾತಂತ್ರ್ಯ ಬೇರೆ ದೇಶಗಳಲ್ಲಿ ಇಲ್ಲ ಎಂದರು.
ಪತ್ರಿಕೆಗಳನ್ನು ಓದದ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಮಾಧ್ಯಮಗಳಿಗೆ ಅಷ್ಟು ಮಹತ್ವವಿದೆ. ಪತ್ರಿಕಾರಂಗ ದೇಶದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಉಪನ್ಯಾಸ ನೀಡುತ್ತ, ಪತ್ರಕರ್ತರು ಹಾಗೂ ಶಿಕ್ಷಕರು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ತಮ್ಮ ಕೈಯಲ್ಲಿ ದೇಶದ ಹಾಗೂ ಮಕ್ಕಳ ಭವಿಷ್ಯವಿದೆ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಯಾವುದೇ ದ್ವೇಷದಿಂದ ಕೆಲಸ ಮಾಡದ ವಸ್ತುನಿಷ್ಠ ವರದಿ ಮಾಡಬೇಕು. ಸಮಯ ಮತ್ತು ಆರೋಗ್ಯದ ಕಡೆಗೆ ಗಮನ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾತನಾಡಿ, ಉದ್ಯೋಗ ಸೇರುವವರೆಗೆ ಶಿಕ್ಷಕರು ನಮಗೆ ಮಾರ್ಗದರ್ಶಕರಾದರೆ ಉದ್ಯೋಗಕ್ಕೆ ಸೇರಿದ ನಂತರ ಪತ್ರಕರ್ತರು ಮಾರ್ಗದರ್ಶಕರಾಗಿರುತ್ತಾರೆ. ಪತ್ರಕರ್ತರು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ನೋಡಿದ್ದೇನೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಪ್ರತಿಯೊಬ್ಬರೂ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಎಸ್ಪಿ ಡಾ. ಸಂಜೀವ ಪಾಟೀಲ, ಪುಂಡಲೀಕ ಬಾಳೋಜಿ, ವಾರ್ತಾ ಇಲಾಖೆಯ ಉಪನಿರ್ದಶಕ ಗುರುನಾಥ ಕಡಬೂರ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಮತ್ತಿತರರು ಭಾಗವಹಿಸಿದ್ದರು.
ಹಿರಿಯ ಪತ್ರಕರ್ತರು, ಪ್ರತಿಭಾವಂತ ಮಕ್ಕಳ ಸನ್ಮಾನ ನಡೆಯಿತು. ಡಾ.ಸ್ಫೂರ್ತಿ ಮಾಸ್ತಿಹೊಳಿ ಧ್ಯಾನದ ಮಹತ್ವ ತಿಳಿಸಿದರು. ಕೆಯುಡಬ್ಲ್ಯುಜೆ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ಅಧ್ಯಕ್ಷತೆ ವಹಿಸಿದ್ದರು.ಶಿವಾನಂದ ತಾರಿಹಾಳ ಸ್ವಾಗತಿಸಿದರು. ಶ್ರೀಶೈಲ ಮಠದ ಆಶಯ ನುಡಿದರು. ನವೇತಾ ಜೈನ್ ನಿರೂಪಿಸಿದರು.