100 ವರ್ಷಗಳಷ್ಟು ಹಳೇ ಪುರಾತನ ಕಟ್ಟಡ ಪತ್ತೆ, ಸ್ಥಳ ಪರಿಶೀಲಿಸಿದ ತಹಶೀಲ್ದಾರ್

ರಾಮನಗರ,ಜು6: ರೇಷ್ಮೆ ನಗರಿ ರಾಮನಗರದ ಹೃದಯ ಭಾಗದ ಎಂ. ಜಿ. ರಸ್ತೆಯಲ್ಲಿ ಅಂಗಡಿ ನಿರ್ಮಾಣಕ್ಕೆ ಬುನಾದಿ ತೋಡುವಾಗ ನೆಲಮಾಳಿಗೆ ಪತ್ತೆಯಾಗಿತ್ತು. ಸ್ಥಳಕ್ಕೆ ತಾಲ್ಲೂಕು ತಹಶೀಲ್ದಾರ್, ನಗರಸಭೆಯ ಕಮೀಷನರ್ ಹಾಗೂ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿತು.
ನಿಗೂಢ ನೆಲ ಮಾಳಿಗೆ ಪತ್ತೆಯಾದ ಸ್ಥಳಕ್ಕೆ ಬುಧವಾರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್, ನಗರಸಭೆ ಪೌರಾಯುಕ್ತ ನಂದಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು. ಕಟ್ಟಡದ ಕುರಿತು ಪುರಾತತ್ವ ಇಲಾಖೆ ತನಿಖೆ ನಡೆಸುವ ಭರವಸೆ ನೀಡಿದೆ.
ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮಾಲೀಕ ನವಾಜ್ ಅಹಮದ್ ಜೊತೆ ಮಾತುಕತೆ ನಡೆಸಿ, ನಿವೇಶನಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದರು. ನೆಲ ಮಾಳಿಗೆ ಯಾವ ಕಾಲದ್ದು? ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಪುರಾತತ್ವ ಇಲಾಖೆಯ ತಜ್ಞರು ಬಂದು ಪರಿಶೀಲನೆ ಮಾಡಿದರೆ ಮಾತ್ರ ನಿಖರ ಮಾಹಿತಿ ತಿಳಿಯಲಿದೆ.
100 ವರ್ಷಗಳಷ್ಟು ಹಳೇ ಕಟ್ಟಡ
ನೆಲಮಾಳಿಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ವಿಜಯ್ ಕುಮಾರ್, “ಕಟ್ಟಡ ನಿರ್ಮಾಣಕ್ಕೆ ತಳಪಾಯ ತೆಗೆಯುವಾಗ ನೆಲಮಾಳಿಗೆ ಪತ್ತೆಯಾಗಿದೆ. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ, ಕಟ್ಟಡವನ್ನು ಹಳೆ ಮಾದರಿಯ ಗಾರೆಯಿಂದ ನಿರ್ಮಾಣ ಮಾಡಿದ್ದಾರೆ, ಸುಮಾರು 100 ವರ್ಷಗಳಷ್ಟು ಹಳೇ ಕಟ್ಟಡದ ರೀತಿ ಕಾಣುತ್ತಿದೆ” ಎಂದು ತಿಳಿಸಿದರು.
ಪುರಾತತ್ವ ಇಲಾಖೆಯ ಅಧಿಕಾರಿ ಕರೆಸಲು ಕ್ರಮ
“ಮೈಸೂರಿನಲ್ಲಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಪೋನ್ ಮೂಲಕ ಸಂಪರ್ಕ ಮಾಡಿ , ನೆಲ ಮಾಳಿಗೆಯ ಸ್ಥಳವನ್ನು ಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇನೆ. ಶೀಘ್ರವಾಗಿ ಮೈಸೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಲು ಕ್ರಮ ಕೈಗೊಳ್ಳುತ್ತೇನೆ, ಅಲ್ಲದೇ ಪುರಾತತ್ವ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ನೆಲ ಮಾಳಿಗೆಯ ನಿಖರ ಮಾಹಿತಿ ತಿಳಿಯುವವರೆಗೆ ಯಾವುದೇ ಕಟ್ಟಡ ಕಾಮಗಾರಿ ನಡೆಸದೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ಮಾಡಿದ್ದೇನೆ” ಎಂದು ತಹಶೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು.
ರಾಜ ಮನೆತನಗಳ ಅಳ್ವಿಕೆಯನ್ನು ಕಂಡ ರಾಮನಗರ
ಇನ್ನೂ ಈ ಸಂಭಂದ ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಅಂಕನಹಳ್ಳಿ ಪಾರ್ಥ, “ರಾಮನಗರ ಪ್ರದೇಶವನ್ನು ಗಂಗರು, ಚೋಳರು, ಕದಂಬರು ಸೇರಿದಂತೆ ಹಲವು ರಾಜ ಮನೆತನಗಳ ಅಳ್ವಿಕೆಯನ್ನು ಕಂಡಿದೆ, ಬ್ರಿಟಿಷ್ ಅಧಿಕಾರಿ ಸರ್ ಬ್ಯಾರಿ ಕ್ಲೋಸ್ ರಾಮನಗರದಲ್ಲಿ ಆಳ್ವಿಕೆ ನಡೆಸಿದ್ದಾರೆ ಎನ್ನುವುದಕ್ಕೆ ಶಾಸನ ಕೂಡ ಇದೆ. ಪ್ರಸ್ತುತ ಪತ್ತೆಯಾಗಿರುವ ನೆಲ ಮಾಳಿಗೆ ಬಗ್ಗೆ ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಸುವ ಮೂಲಕ ಇತಿಹಾಸದ ಮೇಲೆ ಬೆಳಕು ಚಲ್ಲಬೇಕು” ಎಂದು ಆಗ್ರಹಿಸಿದರು.
ನೆಲಮಾಳಿಗೆ ಒಳಗೆ ಪ್ರವೇಶ ಮಾಡಿದ ತಹಶೀಲ್ದಾರ್ ವಿಜಯ್ ಕುಮಾರ್ ಮತ್ತು ನಗರಸಭೆ ಕಮಿಷನರ್ ನಂದಕುಮಾರ್ ಪರಿಶೀಲನೆ ನಡೆಸಿದರು. ಕಟ್ಟಡ ಪುರಾತನವಾಗಿದ್ದು ಇನ್ನು ಗಟ್ಟಿಮುಟ್ಟಾಗಿರುವುದನ್ನು ಗಮನಿಸಿದರು. ಹಾಗೂ ನೆಲ ಮಾಳಿಗೆ ಎರಡು ಬದಿಯಲ್ಲಿ ಮಣ್ಣು ಮುಚ್ಚಿ ಉದ್ದೇಶ ಪೂರ್ವಕವಾಗಿ ಬಂದ್ ಮಾಡಿದ್ದಾರೆ ಎಂದರು.
ಶಸ್ತ್ರಗಾರಗಳ ಸಿಡಿಮದ್ದಿನ ಮನೆ
ನೆಲದಾಳದಲ್ಲಿ ಪತ್ತೆಯಾಗಿರುವ ನೆಲಮಾಳಿಗೆ ಹಲವು ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ. ನಿಗೂಢ ಕಟ್ಟಡ ಪತ್ತೆಯಾದ ಪಕ್ಕದ ಬೀದಿಗೆ ಹಿಂದೆ ಪಾನಿ ಗಲ್ಲಿ ಎಂದು ಹೆಸರಿತ್ತು ಹಾಗಾಗಿ ಇದು ನೀರಿನ ಸಂಗ್ರಹದ ಟ್ಯಾಂಕ್ ಎನ್ನುತ್ತಿದ್ದಾರೆ. ಇನ್ನೂ ಕೆಲವರು ನೆಲ ಮಾಳಿಗೆ ಸಿಕ್ಕ ಬೀದಿಯಲ್ಲಿ ಹಿಂದೆ (ಟಾಂಗಾ ಸ್ಟಾಂಡ್) ಕುದುರೆ ಗಾಡಿಗಳ ನಿಲ್ದಾಣ ಇತ್ತು ಹಾಗಾಗಿ ಇದು ಕುದುರೆ ಲಾಯ ಎನ್ನುತ್ತಿದ್ದಾರೆ ಹಾಗೂ ಮತ್ತಷ್ಟು ಮಂದಿ ನೆಲ ಮಾಳಿಗೆ ಸಿಕ್ಕ ಸನಿಹದಲ್ಲೇ ತೋಪು (ಪಿರಂಗಿ)ಗಳ ನಿಲ್ಲಿಸುವ ಬೀದಿ ಇತ್ತು ಹಾಗಾಗಿ ಶಸ್ತ್ರಗಾರಗಳ ಸಿಡಿಮದ್ದಿನ ಮನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.