ಡೊಲೊ 650 ಮಾತ್ರೆ ಉತ್ಪಾದಕ ಕಂಪನಿಗೆ ಐಟಿ ಶಾಕ್: ಬೆಂಗಳೂರು ಸೇರಿ 40 ಕಡೆ ದಾಳಿ

ಡೊಲೊ 650 (Dolo 650 Tablet) ಮಾತ್ರೆ ಉತ್ಪಾದನಾ ಕಂಪನಿಯ ಬೆಂಗಳೂರಿನ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊರೊನಾ ವೈರಸ್ ಅಬ್ಬರದ ವೇಳೆ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ್ದ ಡೋಲೊ 650 ಸಮರ್ಪಕವಾಗಿ ಆದಾಯ ತೆರಿಗೆ ಪಾವತಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಡೋಲೊ ಮಾತ್ರೆ ಉತ್ಪಾದಕ ಸಂಸ್ಥೆಯಾದ ಮೈಕ್ರೋ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಐಟಿ ದಾಳಿ ಮಾಡಲಾಗಿದ್ದು, ಸಿಎಂಡಿ ದಿಲೀಪ್ ಸುರನಾ, ನಿರ್ದೇಶಕ ಆನಂದ್ ಸುರಾನಾ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಮೈಕ್ರೋಲ್ಯಾಬ್ಸ್ ಕೇಂದ್ರ ಕಚೇರಿಯಿದ್ದು, ಬೆಂಗಳೂರಿನ ಕೇಂದ್ರ ಕಚೇರಿ ಅಲ್ಲದೇ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ರೇಡ್ ನಡೆದಿದೆ.
ಐಟಿ ತೆರಿಗೆ ವಂಚನೆ ಮಾಹಿತಿ ಮೇಲೆ ರೇಡ್ ಮಾಡಿದ್ಧಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.