fbpx
EducationKarnataka NewsNationalPolitics

ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲು ಸೃಷ್ಟಿಸಿರುವ ನಾಲ್ವರು ದಕ್ಷಿಣದ ಹಿರಿಯರಿಗೆ ಮೇಲ್ಮನೆಯ ಗೌರವ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲು ಸೃಷ್ಟಿಸಿರುವ ನಾಲ್ವರು ಮಹೋನ್ನತರನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಕರ್ನಾಟಕದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಆಯ್ಕೆ ಮಾಡಿದರೆ, ತಮಿಳುನಾಡಿನವರಾದ ಸಂಗೀತ ಮಾಂತ್ರಿಕ ಇಳಯರಾಜ, ಆಂಧ್ರಪ್ರದೇಶದ ಚಿತ್ರಸಾಹಿತಿ ವಿ.ವಿಜಯೇಂದ್ರ ಪ್ರಸಾದ್‌, ಕೇರಳ ಮೂಲದ ಆಯತ್ಲೀಟ್‌ ಪಿ.ಟಿ. ಉಷಾ ಅವರೂ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಈ ಗಣ್ಯರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಚತುರ್ದಾನ ಪರಂಪರೆ ಸಾಧಿಸಿದ ರಾಜರ್ಷಿ
ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನ. 25, 1948ರಂದು ಜನಿಸಿದರು. ಅವರು 20 ವರ್ಷದವರಿರುವಾಗಲೇ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಧರ್ಮಸ್ಥಳ ಕ್ಷೇತ್ರಕ್ಕೆ “ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ’ ಎಂಬ ಹೆಸರು ಬರುವಂತೆ ಮಾಡಿದ್ದಾರೆ.


ಧರ್ಮಸ್ಥಳದ ಬೃಹತ್‌ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದ ಮೂಲಕ ಅನ್ನ, ಅಭಯ, ವಿದ್ಯೆ, ಶಿಕ್ಷಣ ನೀಡುವ ಮೂಲಕ ಚತುರ್ದಾನ ಶ್ರೇಷ್ಠ ಪರಂಪರೆಗೆ ಸಾಕ್ಷಿಯಾಗಿದ್ದಾರೆ.

ಧರ್ಮಸ್ಥಳ ಮತ್ತು ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌, ಜತೆಗೆ ದೇಶದ ಮೊದಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಸ್ಥಾಪಿಸುವ ಮೂಲಕ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ವಿಶ್ವಾದ್ಯಂತ ಪ್ರಚುರ ಪಡಿಸಿದವರು. ಈ ಮೂಲಕ 25ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ – ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಗ್ರಾಮಾಭಿವೃದ್ಧಿ, ಸ್ವ ಉದ್ಯೋಗಕ್ಕಾಗಿ ರುಡ್ಸೆಟ್‌ ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಧರ್ಮೋತ್ಥಾನ ಟ್ರಸ್ಟ್‌ ಸ್ಥಾಪಿಸಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಗಿದ್ದಾರೆ. ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು 1991ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ. ಈ ಟ್ರಸ್ಟ್‌ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಹಲವು ಪ್ರಶಸ್ತಿ- ಗೌರವ: ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ನೀಡಿ ಗೌರವಿಸಿವೆ. 2015ರಲ್ಲಿ ಭಾರತ ಸರಕಾರ ಪದ್ಮವಿಭೂಷಣ ನೀಡಿ ಗೌರವಿಸಿದೆ. ಇದಲ್ಲದೇ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮಾರಿಂದ “ರಾಜರ್ಷಿ’ ಗೌರವ, ಅನೇಕ ಧಾರ್ಮಿಕ ಮಠಗಳು ನೀಡುವ “ಧರ್ಮರತ್ನ’, “ಧರ್ಮಭೂಷಣ’, “ಅಭಿನವ ಚಾವುಂಡರಾಯ’, “ಪರೋಪಕಾರ ಧುರಂಧರ’ ಮೊದಲಾದ ಬಿರುದುಗಳು ಇವರಿಗೆ ಸಂದಿವೆ.

ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್‌, “ವರ್ಷದ ಕನ್ನಡಿಗ’ ಪ್ರಶಸ್ತಿ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ರತ್ನ, ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಲಂಡನ್‌ನ ಪ್ರತಿಷ್ಠಿತ “ಆಶೆxನ್‌ ಸಂಸ್ಥೆಯು ನೀಡುವ “ಜಾಗತಿಕ ಹಸಿರು ಆಸ್ಕರ್‌’ಎಂದೇ ಪರಿಗಣಿಸಲಾದ “ಆಶೆxನ್‌ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’, ಖಾಸಗಿ ವಾಹಿನಿಯ “ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ, ಏಷ್ಯಾ ವನ್‌ ಸಂಸ್ಥೆಯ ಏಷ್ಯಾದ ಶ್ರೇಷ್ಠ ನಾಯಕರು ಪ್ರಶಸ್ತಿಯೂ ಹೆಗ್ಗಡೆಯವರ ಮುಡಿಗೇರಿದೆ.

ಚಿನ್ನದ ಹುಡುಗಿ, ಓಟದ ರಾಣಿ ಪಿ.ಟಿ.ಉಷಾ
ಭಾರತದ ಓಟದ ರಾಣಿಯೆಂದೇ ಕರೆಸಿಕೊಳ್ಳುವ ಕೇರಳದ ಪಿ.ಟಿ.ಉಷಾ, ಇವತ್ತಿಗೂ ಆಯತ್ಲೀಟ್‌ಗಳ ಪಾಲಿನ ಸ್ಫೂರ್ತಿಸೆಲೆ. ಆಕೆಯನ್ನು ಚಿನ್ನದ ಹುಡುಗಿ, ಪಯ್ಯೋಲಿ ಎಕ್ಸ್‌ಪ್ರೆಸ್‌ ಎಂದೂ ಪ್ರೀತಿಯಿಂದ ಕರೆಯುತ್ತಾರೆ.

ಹುಟ್ಟಿದ್ದು ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಕುತ್ತಾಲಿಯಲ್ಲಿ 1964ರ ಜೂ.27ರಂದು. 1977ರಂದು ಆಕೆಯಲ್ಲಿರುವ ಸಾಮರ್ಥ್ಯವನ್ನು ಕೋಚ್‌ ಒ.ಎಂ. ನಂಬಿಯಾರ್‌ ಗುರು ತಿಸಿದರು. ಅನಂತರ ಅವರ ಚಿನ್ನದ ಓಟ ಶುರುವಾಯಿತು. ಪಿ.ಟಿ. ಉಷಾ 1982ರ ಏಷ್ಯಾಡ್‌ನ‌ಲ್ಲಿ 100, 200 ಮೀ. ಓಟದಲ್ಲಿ ಎರಡು ಬೆಳ್ಳಿ ಪದಕ ಗೆದ್ದರು. ಆದರೆ ಆಕೆ ನಿಜಕ್ಕೂ ಮನೆಮಾತಾ ಗಿದ್ದು 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ. 400 ಮೀ. ಹರ್ಡಲ್ಸ್‌ನಲ್ಲಿ 55.42 ಸೆಕೆಂಡ್‌ನ‌ಲ್ಲಿ ಗುರಿಮುಟ್ಟಿ ನಾಲ್ಕನೇ ಸ್ಥಾನ ಪಡೆದಿದ್ದರು. 1 ಸೆಕೆಂಡ್‌ಗೂ ಕಡಿಮೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು! ಆಗ ಅವರಿಗೆ ಕೇವಲ 20 ವರ್ಷ. ಅವರು ಸೋತರೂ ಅಂದು ಭಾರತೀಯರಿಗೆ ಭಾರೀ ಭರವಸೆ ಹುಟ್ಟಿಕೊಂಡಿತ್ತು.

ದ.ಕೊರಿಯದ ಸಿಯೋಲ್‌ನಲ್ಲಿ ನಡೆದ 1986ರ ಏಷ್ಯನ್‌ ಗೇಮ್ಸ್‌ನಲ್ಲಿ ಅದ್ಭುತವನ್ನೇ ಸಾಧಿಸಿದರು. 200 ಮೀ., 400 ಮೀ., 400 ಮೀ. ಹರ್ಡಲ್ಸ್‌., 4×400 ಮೀ. ರಿಲೇ ಸಹಿತ ನಾಲ್ಕು ಚಿನ್ನದ ಪದಕ ಗೆದ್ದರು. ಹಾಗೆಯೇ 100 ಮೀ.ನಲ್ಲಿ ಬೆಳ್ಳಿ ಜಯಿಸಿದ್ದರು.

ಚಿತ್ರ ಸಂಗೀತ ಲೋಕದ ಹೆಗ್ಗುರುತು ಇಳಯರಾಜ
ತಮ್ಮ ಅಗಾಧ ಪ್ರತಿಭೆಯಿಂದ ಇಡೀ ವಿಶ್ವದಲ್ಲೇ ಭಾರತೀಯ ಚಿತ್ರ ಸಂಗೀತಕ್ಕೊಂದು ಹೆಗ್ಗುರುತು ತಂದವರು ಇಳಯರಾಜ. ತಮಿಳುನಾಡಿನ ಥೇಣಿ ಜಿಲ್ಲೆಯ ಪನ್ನೈಪುರಂ ಪ್ರಾಂತ್ಯದಲ್ಲಿರುವ ಪುಟ್ಟ ಹಳ್ಳಿಯಲ್ಲಿ 1943ರಲ್ಲಿ ಜನಿಸಿದ ಇವರ ಮೂಲ ಹೆಸರು ಜ್ಞಾನದೇಸಿಗನ್‌.

1975ರಲ್ಲಿ ತೆರೆಕಂಡ ಅಣ್ಣಾಕಿಲಿ ಎಂಬ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಪರಿಚಯಗೊಂಡರು. “ಡಿ-ಮೈನರ್‌’ನಲ್ಲಿ ಎರಡು ಸೆಮಿಟೋನ್‌ ಹೆಚ್ಚು ಮಾಡಿ “ಇ-ಮೈನರ್‌’ನಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದು ಇವರ ಸಂಗೀತದ ವಿಶೇಷತೆ.

ಕನ್ನಡಕ್ಕೂ ಇವರಿಗೂ ದೊಡ್ಡ ನಂಟಿದೆ. ಕೊಲ್ಲೂರು ಮೂಕಾಂಬಿಕೆಯ ಅಪ್ಪಟ ಭಕ್ತ. ಕನ್ನಡದ ಸಂಗೀತ ದಿಗ್ಗಜ ಜಿ.ಕೆ. ವೆಂಕಟೇಶ್‌ ಅವರ ಅಕ್ಕರೆಯ ಶಿಷ್ಯ ಇವರು. ಕನ್ನಡದ ಗೀತಾ, ನೀ ನನ್ನ ಗೆಲ್ಲಲಾರೆ ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನೀಡಿ, ಅಸಂಖ್ಯ ಹಿಟ್‌ ಹಾಡು ಗಳನ್ನು ಕೊಟ್ಟ ಹೆಗ್ಗಳಿಕೆ ಅವರದ್ದು. “ಗೀತಾ’ ಚಿತ್ರದ “ಜೊತೆ ಯಲಿ’ ಹಾಡಂತೂ ಸಾರ್ವಕಾಲಿಕ ಹಿಟ್‌ ಹಾಡು. 1996ರ ಶಿವಸೈನ್ಯ ಚಿತ್ರದ “ಜೈಲಲಿ ಹುಟ್ಟಿ ಬಯಲಿಗೆ ಬಂದೆ’ ಹಾಡನ್ನು ಬರೆದು ಕನ್ನಡ ಚಿತ್ರ ಸಾಹಿತಿಯೂ ಎನಿಸಿದ್ದಾರೆ. 1985ರಲ್ಲಿ ತೆರೆಕಂಡಿದ್ದ ಶಂಕರ್‌ನಾಗ್‌ರವರ ಆಯಕ್ಸಿಡೆಂಟ್‌ ಚಿತ್ರಕ್ಕೆ ಸಂಭಾ ವನೆ ಪಡೆಯದೇ ಸಂಗೀತ ನೀಡುವ ಮೂಲಕ ಚಿತ್ರವನ್ನು ಅವರು ಮೆಚ್ಚಿ ಪ್ರೋತ್ಸಾಹಿಸಿದ್ದರು. 2010ರಲ್ಲಿ ಕೇಂದ್ರ ಸರಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕಥೆಯಲ್ಲೇ ಮನಸ್ಸನ್ನು ಸೆರೆಹಿಡಿದ ಪ್ರಸಾದ್‌
ಮೂಲತಃ ಕರ್ನಾಟಕದವರಾದ ಕೊಡೂರಿ ವಿಶ್ವ ವಿಜಯೇಂದ್ರ ಪ್ರಸಾದ್‌ (81) ಅವರು 80ರ ದಶಕದಲ್ಲಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. 1941ರಲ್ಲಿ ಆಂಧ್ರದ ಕೋವೂರಿನಲ್ಲಿ ಜನಿಸಿದ ಅವರು ಒಂದಿಷ್ಟು ಚಿತ್ರಗಳಿಗೆ ಕಥೆ, ಚಿತ್ರಕಥೆ ರಚಿಸಿ, 90ರ ದಶಕದಲ್ಲಿ ಸಾಕಷ್ಟು ಜನಪ್ರಿಯರಾದರು. ಬೊಬ್ಬಿಲಿ ಸಿಂಹಂ, ರಾನಾ ಬುಲ್ಲೋಡು, ಸಮರಸಿಂಹ ರೆಡ್ಡಿ ಮುಂತಾದ ಚಿತ್ರಗಳಿಗೆ ಚಿತ್ರಕಥೆ ರಚಿಸಿದ ಅವರು, ವಿಷ್ಣುವರ್ಧನ್‌ ಅಭಿನಯದ ಅಪ್ಪಾಜಿ ಸಿನಿಮಾಗೆ ಚಿತ್ರಕಥೆ ಬರೆಯುವ ಮೂಲಕ ಕನ್ನಡ ಸಿನಿ ಲೋಕ ಪ್ರವೇಶಿಸಿದರು.

ಅನಂತರ ಶಿವರಾಜ್‌ಕುಮಾರ್‌ ಅಭಿನಯದ “ಕುರುಬನರಾಣಿ’ ಚಿತ್ರಕ್ಕೂ ಚಿತ್ರಕಥೆ ಬರೆದರು. ತೆಲುಗಿನಲ್ಲಿ ಹಲವು ಚಿತ್ರಗಳಿಗೆ ಬರೆದರಾದರೂ, ದೊಡ್ಡ ಜನಪ್ರಿಯತೆ ತಂದುಕೊಟ್ಟ ಚಿತ್ರ “ಬಾಹುಬಲಿ’. ಈ ಚಿತ್ರಗಳ ಯಶಸ್ಸಿನಿಂದಾಗಿ ಅವರು ಹಿಂದಿಯಲ್ಲಿ ಭಜರಂಗಿ ಭಾಯಿಜಾನ್‌, ಮಣಿಕರ್ಣಿಕಾ ಮುಂತಾದ ಚಿತ್ರಗಳಿಗೆ ಸಾಹಿತ್ಯ ಬರೆಯುವಂತಾಯಿತು. ತಮ್ಮ ಮಗ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಎಲ್ಲ ಚಿತ್ರಗಳಿಗೂ ವಿಜಯೇಂದ್ರ ಅವರೇ ಕಥೆ ರಚಿಸಿದ್ದು, ಇತ್ತೀಚೆಗಿನ ಆರ್‌ಆರ್‌ಆರ್‌ ಚಿತ್ರ ಜಗತ್ತಿನಾದ್ಯಂತ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು. ಕನ್ನಡದಲ್ಲಿ ನಿಖೀಲ್‌ ಕುಮಾರ ಸ್ವಾಮಿ ಅಭಿನಯದ “ಜಾಗ್ವಾರ್‌’ ಚಿತ್ರದ ಕಥೆಯೂ ಇವರದ್ದೇ. ಚಿತ್ರ ಸಾಹಿತಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: