ತಂದೆ ಮೇಲೆಯೇ ರೇಪ್ ಕೇಸ್ ಹಾಕಿದ ಬಾಲಕಿ! 7 ವರ್ಷ ಜೈಲಲ್ಲಿದ್ದ ಅಪ್ಪನ ಕಣ್ಣೀರ ಕಥೆಯಿದು.

ಮುಂಬೈ: 10 ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುತ್ತದೆ ನಮ್ಮ ಕಾನೂನು. ಆದರೆ ಅದೇ ಇನ್ನೊಂದೆಡೆ, ಸುದೀರ್ಘ ವಿಚಾರಣೆಯಿಂದ ಒಬ್ಬ ಅಮಾಯಕ ನಿರಪರಾಧಿ ಎಂದು ಕೋರ್ಟ್ ಹೇಳುವುದರೊಳಗೆ ಅದೆಷ್ಟೋ ವರ್ಷ ಜೈಲಿನಲ್ಲಿ ಕೊಳೆಯುವ ಸನ್ನಿವೇಶಗಳು ನಡೆಯುತ್ತವೆ.
ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ. ಮಗಳಿಂದಲೇ ಮೋಸ ಹೋಗಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿರುವ ಅಪ್ಪನ ಕಣ್ಣೀರ ಕಥೆಯಿದು!
ವಿಪುಲ್ ನರ್ಕರ್ ಎಂಬ ವ್ಯಕ್ತಿ 28 ವರ್ಷ ವಯಸ್ಸಿನ ಯುವಕ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎರಡು ಮಕ್ಕಳ ತಾಯಿ, ವಿಚ್ಛೇದಿತೆಯೊಬ್ಬಳ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಆಮೇಲೆ ಆಕೆಯ ಆಸೆಯಂತೆ ಮದುವೆಯನ್ನೂ ಮಾಡಿಕೊಂಡಿದ್ದಾರೆ ವಿಪುಲ್.
ಮಹಿಳೆಗೆ ಇದಾಗಲೇ ಮೊದಲನೆಯ ಗಂಡನಿಂದ ಜನಸಿದ್ದ ಮಗಳಿಗೆ 15 ವರ್ಷ ವಯಸ್ಸಾಗಿತ್ತು. ಆಕೆ ತನ್ನ ಸ್ನೇಹಿತನನ್ನು ಆಗಾಗ್ಗೆ ಭೇಟಿಯಾಗುತ್ತಿದ್ದಳು. ಇಬ್ಬರ ಸ್ನೇಹ ಮಿತಿಯನ್ನು ಮೀರಿತ್ತು. ಇದನ್ನು ಗಮನಿಸಿದ ಮಲತಂದೆಯಾಗಿರುವ ವಿಪುಲ್ ಆಕೆಯನ್ನು ಕರೆದು ಎಚ್ಚರಿಸಿದ್ದರು. ಇನ್ನೂ ಬಾಲಕಿಯಾಗಿರುವ ನಿನಗೆ ಈ ರೀತಿ ಸಂಬಂಧ ಸರಿಯಾದದ್ದಲ್ಲ, ಇದರಿಂದ ಭವಿಷ್ಯ ಹಾಳಾಗುತ್ತದೆ ಎಂದು ಎಚ್ಚರಿಸುತ್ತಿದ್ದರು. ಇದು ಆ ಬಾಲಕಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಹೀಗೆ ಕೆಲ ದಿನ ಮುಂದುವರೆಯಿತು. ತನ್ನ ಮಲತಂದೆ ಪದೇ ಪದೇ ತನ್ನ ಸ್ನೇಹ ಸಂಬಂಧಕ್ಕೆ ಅಡ್ಡಪಡಿಸುತ್ತಿರುವುದನ್ನು ಕಂಡ ಬಾಲಕಿ, ತನ್ನ ಹೆತ್ತ ತಂದೆಯ ಜತೆಗೆ ಹೋಗಲು ಯೋಚಿಸಿದಳು. ಹೇಗಾದರೂ ಮಾಡಿ ಡಿವೋರ್ಸ್ ಆಗಿರುವ ತಂದೆ-ತಾಯಿಯಂದಿರನ್ನು ಒಟ್ಟುಗೂಡಿಸಲು ಪ್ಲ್ಯಾನ್ ಮಾಡಿದಳು. ಆಗ ಆಕೆಯ ನೆರವಿಗೆ ಬಂದದ್ದು ಟಿ.ವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳಂತೆ!
ಧಾರಾವಾಹಿ ನೋಡಿ ಪ್ಲ್ಯಾನ್ ರೂಪಿಸಿದ ಬಾಲಕಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದಳು. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ತನಿಖೆಗೆ ಬಂದಾಗ, ನನ್ನ ತಂದೆ (ಮಲತಂದೆ) ನನ್ನ ಮೇಲೆ ಅತ್ಯಾಚಾರ ಮಾಡಿದ. ಆದ್ದರಿಂದ ನಾನು ಬದುಕಿರಬಾರದು ಎಂದು ಯೋಚಿಸಿ ಆತ್ಮಹತ್ಯೆಗೆ ನಿರ್ಧರಿಸಿದೆ ಎಂದಳು. ಈ ಹಿನ್ನೆಲೆಯಲ್ಲಿ, ಅಮಾಯಕ ತಂದೆಯ ವಿರುದ್ಧ ರೇಪ್ ಕೇಸ್ ದಾಖಲಾಯಿತು.
ಏಳು ವರ್ಷಗಳವರೆಗೆ ಇದರ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಅಮಾಯಕ ವಿಪುಲ್ ನರ್ಕರ್ ಅವರು ಜನರು, ನೆರೆಹೊರೆಯವರ ಕಣ್ಣಲ್ಲಿ ಅತ್ಯಾಚಾರಿ ಆಗಿದ್ದರು. ಅದೂ ಮಗಳ ಮೇಲೆ! ಈ ಆರೋಪದ ಹಿನ್ನೆಲೆಯಲ್ಲಿ ಕೆಲಸವನ್ನೂ ಕಳೆದುಕೊಂಡರು.
ಜೈಲಿನಲ್ಲಿದ್ದಾಗ ವಕೀಲ ಗಣೇಶ್ ಘೋಲಾಪ್ ಅವರಿಗೆ ಪರಿಚಯವಾದರು. ವಿಪುಲ್ ಅವರ ಒಳ್ಳೆತನವನ್ನು ಅರಿತ ವಕೀಲರು ಹೇಗಾದರೂ ಮಾಡಿ ಅವರನ್ನು ಬಂಧಮುಕ್ತಗೊಳಿಸಲು ಯೋಚಿಸಿದರು. ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಅವರು ಕಲೆ ಹಾಕಿದರು. ನಂತರ ಕೋರ್ಟ್ನಲ್ಲಿ ವಿಚಾರಣೆ ಬಂದಾಗ ಬಾಲಕಿ, ಆಕೆಯ ಮೂವರು ಪುರುಷ ಸ್ನೇಹಿತರು, ಆಕೆಯ ಪ್ರಿನ್ಸಿಪಾಲ್, ವೈದ್ಯಕೀಯ ಅಧಿಕಾರಿಗಳು ಮತ್ತು ನೆರೆಹೊರೆಯವರು ಸೇರಿದಂತೆ 12 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು. ಕೋರ್ಟ್ಗೆ ಹೆದರಿ ಬಾಲಕಿ ನಿಜ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ. ವಿಪುಲ್ ಅಮಾಯಕರು ಎಂದು ಕೋರ್ಟ್ಗೆ ಮನವರಿಕೆಯಾಗಿ ಅವರು ತಪ್ಪಿತಸ್ಥರು ಎಂದು ಹೇಳಿ ಬಿಡುಗಡೆ ಮಾಡಿತು.
ಜೈಲಿನಲ್ಲಿ ಏಳು ವರ್ಷ ಪಡಬಾರದ ಕಷ್ಟಪಟ್ಟು, ಎಲ್ಲವನ್ನೂ ಕಳೆದುಕೊಂಡ ಈ ಅಪ್ಪ ತಮ್ಮದಲ್ಲದ ತಪ್ಪಿಗೆ ಈಗ ಬೀದಿಗೆ ಬಂದಿದ್ದಾರೆ. ಕೋರ್ಟ್ನಿಂದ ಇವರು ನಿರಪರಾಧಿ ಎಂದು ಸಾಬೀತಾಗಿದೆ. ಆದರೆ ಹೋದ ಮಾನ ವಾಪಸ್ ಬರುತ್ತದೆಯೇ? ನನ್ನ ಯವ್ವನವೆಲ್ಲಾ ಜೈಲಿನಲ್ಲಿ ಹೋಯಿತಲ್ಲ, ಇದಕ್ಕೆ ಯಾರು ಹೊಣೆ? ವಿಚ್ಛೇದಿತೆಯೆಂದು ಕರುಣೆ ತೋರಿ ಮದುವೆಯಾಗಿದ್ದೇ ತಪ್ಪಾಯ್ತಾ? ಎರಡು ಮಕ್ಕಳ ಅಪ್ಪನ ಸ್ಥಾನದಲ್ಲಿ ನಿಂತು ಹೊಣೆ ಹೊತ್ತಿದ್ದೇ ನನಗೆ ಮುಳುವಾಯ್ತಾ? ನನ್ನ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ಎಂದು ವಿಪುಲ್ ಕಣ್ಣೀರು ಇಡುತ್ತಿದ್ದಾರೆ.