ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರನ್ನು ಹಿಡಿದುಕೊಟ್ಟರೆ BBMP ಪುರಸ್ಕಾರ!
ಇದರಲ್ಲಿ ನಾಗರಿಕರೂ ಭಾಗವಹಿಸಿದರೆ ಅವರಿಗೆ 'ಪರಿಸರ ಹಿತೈಷಿ' ಎಂಬ ಗೌರವವೂ ಸಿಗಲಿದೆ.

ಬೆಂಗಳೂರು: ನಗರದಲ್ಲಿ ನಿತ್ಯವೂ ಕಸದ ತಾಣಗಳಾಗುವ (ಬ್ಲ್ಯಾಕ್ ಸ್ಪಾಟ್) ಸ್ಥಳಗಳನ್ನು ಕಸರಹಿತವನ್ನಾಗಿಸಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ. ಇದರಲ್ಲಿ ನಾಗರಿಕರೂ ಭಾಗವಹಿಸಿದರೆ ಅವರಿಗೆ ‘ಪರಿಸರ ಹಿತೈಷಿ’ ಎಂಬ ಗೌರವವೂ ಸಿಗಲಿದೆ.
ಇದರಲ್ಲಿ ನಾಗರಿಕರೂ ಭಾಗವಹಿಸಿದರೆ ಅವರಿಗೆ ‘ಪರಿಸರ ಹಿತೈಷಿ’ ಎಂಬ ಗೌರವವೂ ಸಿಗಲಿದೆ.
ರಸ್ತೆಗಳಲ್ಲಿ ಕಸ ಸಂಗ್ರಹವಾಗುತ್ತಿರುವ ತಾಣಗಳನ್ನು ಗುರುತಿಸಿರುವ ಬಿಬಿಎಂಪಿ, ಆ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಇಂತಹ ತಾಣಗಳ ಸಮೀಪದ ಮನೆ ಅಥವಾ ವಾಣಿಜ್ಯ ಅಂಗಡಿಗಳಲ್ಲಿ ಅಳವಡಿಸಿ, ಅದರ ‘ಮಾನಿಟರ್’ ಅನ್ನು ಇರಿಸಲಿದೆ. ಕಸವನ್ನು ಯಾರು ಹಾಕುತ್ತಾರೆ ಎಂಬ ಮಾಹಿತಿಯನ್ನು ಅವರು ಬಿಬಿಎಂಪಿಗೆ ನೀಡಬೇಕು. ಅದರ ಆಧಾರದಲ್ಲಿ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರ್ವಹಿಸಲಿದ್ದಾರೆ.
ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಕೊಂಡು, ಮಾಹಿತಿ ನೀಡಿ ಕಸರಹಿತ ತಾಣವನ್ನಾಗಿಸಲು ಸಹಕರಿಸಿದ ಇಂತಹ ನಾಗರಿಕರಿಗೆ ‘ಪರಿಸರ ಹಿತೈಷಿ’ ಎಂಬ ಪ್ರಮಾಣಪತ್ರ ನೀಡಿ ಮುಖ್ಯ ಆಯುಕ್ತರು ಗೌರವಿಸಲಿದ್ದಾರೆ. ಮಾಹಿತಿ ಒದಗಿಸುವ ನಾಗರಿಕರ ಹೆಸರನ್ನು ಗೋಪ್ಯವಾಗಿರಿಸಲಾಗುತ್ತದೆ.
ನಗರದಲ್ಲಿ ನಿತ್ಯವೂ ಕಸ ಸಂಗ್ರಹ ವಾಗುವ 1,549 ತಾಣಗಳಿವೆ. ಇದರಲ್ಲಿ 68 ತಾಣಗಳು ಶಾಶ್ವತ ತಾಣಗಳು. ಅಂದರೆ, ಈ ತಾಣಗಳಲ್ಲೇ ನಿತ್ಯವೂ ತ್ಯಾಜ್ಯ ಶೇಖರಣೆಯಾಗುತ್ತದೆ. ಇನ್ನುಳಿದ ಸ್ಥಳಗಳು ನಿತ್ಯವೂ ಬದಲಾಗುತ್ತವೆ. ಆದರೆ ಅದೇ ಪ್ರದೇಶದಲ್ಲೇ ಇರು ತ್ತವೆ. ನಾಗರಿಕರು ಅಲ್ಲಿ ಕಸವನ್ನು ಎಸೆಯುತ್ತಾರೆ ಅಥವಾ ತಂದು ಹಾಕುತ್ತಿದ್ದಾರೆ.
ಕಸ ಎಸೆಯುವುದರಿಂದಾಗುವ ಆರೋಗ್ಯ ಸಮಸ್ಯೆ, ಪರಿಣಾಮಗಳನ್ನು ತಿಳಿಸಿ, ಅದನ್ನು ನಿಲ್ಲಿಸಿ ಎಂಬ ಪ್ರಚಾರವನ್ನೂ ಕೈಗೊಳ್ಳಲಿದೆ. ಕಸವನ್ನು ವಿಂಗಡಿಸಿ ಸಂಗ್ರಹಕಾರರಿಗೆ ನೀಡಿ ಎಂದೂ ಹೇಳಲಿದೆ. ಇದರ ಜೊತೆಯಲ್ಲಿ ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
‘ನಗರದಲ್ಲಿರುವ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ ನಾಗರಿಕರ ಸಹಕಾರ ದೊಂದಿಗೆ ಕ್ರಮ ಕೈಗೊಂಡು ಕಸರಹಿತ ತಾಣಗಳನ್ನಾಗಿಸಲು ಯೋಜಿಸ ಲಾಗಿದೆ. ಈ ವ್ಯವಸ್ಥೆ ಇಲ್ಲದಿದ್ದರೂ ದಾಖಲೆಯೊಂದಿಗೆ ನಾಗರಿಕರು ಕಸ ಎಸೆಯುವವರ ಬಗ್ಗೆ ವಾರ್ಡ್ ಅಥವಾ ವಿಭಾಗೀಯ ಅಧಿಕಾರಿಗೆ ದೂರು ನೀಡಬಹುದು. ಅಂತಹವರ ಮಾಹಿತಿ ಯನ್ನೂ ಗೋಪ್ಯವಾಗಿರಿಸಲಾಗುತ್ತದೆ. ಹೀಗೆ ಕಸದ ತಾಣವನ್ನು ಕಸರಹಿತ ತಾಣ ವನ್ನಾಗಿಸಲು ನೆರವಾದವರಿಗೆ ‘ಪರಿಸರ ಹಿತೈಷಿ’ ಎಂಬ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯಕ್ತ ಹರೀಶ್ ಕುಮಾರ್ ತಿಳಿಸಿದರು.
ಕಸದ ತಾಣಗಳ ನಿರ್ಮೂಲನೆಗಾಗಿ ಸ್ಥಳೀಯ ನಿವಾಸಿಗಳ ಕಲ್ಯಾಣ/ಕ್ಷೇಮಾಭಿ ವೃದ್ಧಿ ಸಂಘಗಳನ್ನೂ ಸೇರಿಸಿಕೊಂಡು ವಲಯ ಅಧಿಕಾರಿಗಳು ಅರಿವು ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.
ಎಲ್ಲೆಲ್ಲಿ ಬ್ಲ್ಯಾಕ್ ಸ್ಪಾಟ್
ವಲಯ;ಸಂಖ್ಯೆ
ಪೂರ್ವ;250
ಪಶ್ಚಿಮ;268
ದಕ್ಷಿಣ;230
ಮಹದೇವಪುರ;344
ಆರ್.ಆರ್.ನಗರ;86
ಯಲಹಂಕ;121
ದಾಸರಹಳ್ಳಿ;61
ಬೊಮ್ಮನಹಳ್ಳಿ;121
ಒಟ್ಟು;1,481
ಆರ್.ಆರ್. ನಗರ ವಲಯದಲ್ಲಿ ಹೆಚ್ಚು
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 68 ಶಾಶ್ವತ ಕಸದ ಸ್ಥಳಗಳಿವೆ. ನಾಲ್ಕು ವಲಯದಲ್ಲೇ ಈ ತಾಣಗಳಿವೆ. ಇದರಲ್ಲಿ ರಾಜರಾಜೇಶ್ವರಿ ನಗರ ವಲಯ ಪ್ರಥಮ ಸ್ಥಾನದಲ್ಲಿದೆ. ಈ ವಲಯದಲ್ಲಿ 27 ಶಾಶ್ವತ ಕಸದ ತಾಣಗಳಿವೆ. ನಂತರದ ಸ್ಥಾನ ದಕ್ಷಿಣ ವಲಯ (17), ಪೂರ್ವ ವಲಯ (14) ಹಾಗೂ ಮಹದೇವಪುರ ವಲಯ (10) ಇವೆ.