ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ. Bagalkot: ಕೆರೂರು ಪಟ್ಟಣದಲ್ಲಿ ಅನ್ಯಕೋಮಿನ ಗುಂಪುಗಳ ನಡುವೆ ಗಲಾಟೆ, ಇಬ್ಬರಿಗೆ ಚಾಕು ಇರಿತ

ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ.
ಕೆರೂರು ಪಟ್ಟಣದ ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದ ವಿಚಾರಕ್ಕೆ ಕೆಲ ಯುವಕರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯೇ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಬೆನ್ನಲ್ಲೇ ಕೆಲವರು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಮೂವರಿಗೆ ಬಾಗಲಕೋಟೆಯಲ್ಲಿ ಚಿಕಿತ್ಸೆ
ಮೂವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೆರೂರ ಪಟ್ಟಣಕ್ಕೆ ಎಸ್ ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಜಿಲ್ಲಾಧಿಕಾರಿಳಾದ ಪಿ.ಸುನಿಲ್ ಕುಮಾರ್ ಸಹ ಗುಂಪು ಘರ್ಷಣೆಯ ಸಂಪೂರ್ಣ ಮಾಹಿತಿ ಪಡೆದು, ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ
ಇತ್ತ ಘಟನೆ ಬೆನ್ನಲ್ಲೇ ಕೆಲ ಕಿಡಿಗೇಡಿಗಳ ಗುಂಪು ಮಾರುಕಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ, ಅಂಗಡಿಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿ ಜಖಂಗೊಳಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಶುಕ್ರವಾರದವರೆಗೆ ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.
ಹಲವರನ್ನು ವಶಕ್ಕೆ ಪಡೆದಿರುವ ಪೊಲೀಸರು
ಘರ್ಷಣೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಹತ್ತಕ್ಕೂ ಹೆಚ್ಚು ಜನರನ್ನು ಕೆರೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿಯೂ ಫುಲ್ ಆಲರ್ಟ್ ಆಗಿದ್ದ ಪೊಲೀಸರು ಇನ್ನು ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯರು ಅನಾವಶ್ಯಕವಾಗಿ ಮೆನಗಳಿಂದ ಹೊರ ಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಕೆರೂರು ಪಟ್ಟಣದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ
ಬಾಗಲಕೋಟೆ ಉಪವಿಭಾಗದ ವಿವಿಧ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಇಡೀ ಕೆರೂರ ಪಟ್ಟಣ ಪೊಲೀಸರ ಸರ್ಪಗಾವಲಿನಲ್ಲಿದೆ.