Breaking: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್‌ಐ ಬೇಬಿ ಓಲೇಕಾರ್

ಬೆಂಗಳೂರು, ಜುಲೈ 07: ಬಿಬಿಎಂಪಿಯ ಬಿಎಂಟಿಎಫ್ ಅಧಿಕಾರಿ ಲಂಚವನ್ನು ಸ್ವೀಕರಿಸುವ ವೇಳೆಗೆ ಎಸಿಬಿ ದಾಳಿ ಮಾಡಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಪಿಎಸ್‌ಐ ಬೇಬಿ ಓಲೇಕಾರ್ ಒಂದು ಲಕ್ಷ ನಗದನ್ನು ಲಂಚವಾಗಿ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಪಿಎಸ್‌ಐ ಬೇಬಿ ಓಲೇಕಾರ್‌ರನ್ನು ಬಂಧಿಸಿದ್ದಾರೆ.
ಬಿಬಿಎಂಪಿಯ ಬಿಎಂಟಿಎಫ್ ಪಿಎಸ್‌ಐ ಬೇಬಿ ಓಲೇಕಾರ್ ಮಾಜಿ ಕಾರ್ಪೋರೇಟರ್ ಬಳಿಯೇ ಲಂಚ ಪಡೆಯಲು ಮುಂದಾಗಿದ್ದರು. ಹೊರಮಾವು ಅಗರ ಸರ್ವೆ ನಂಬರ್ 153 ರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸಬ್‌ಇನ್ಸ್‌ಪೆಕ್ಟರ್ ಬೇಬಿ ಓಲೇಕಾರ್. ಮಾಜಿ ಕಾರ್ಪೋರೇಟರ್ ಸಹೋದರ ಲಕ್ಷ್ಮೀ ನಾರಾಯಣ್ ದೂರಿನ ಮೇಲೆ 1 ಲಕ್ಷ ಲಂಚದ ಹಣವನ್ನು ಪಡೆಯುವ ವೇಳೆ ಪಿಎಸ್‌ಐ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ದೂರುದಾರ ಸಹೋದರ ಲಕ್ಷ್ಮೀ ನಾರಾಯಣ್ ಹೇಳಿಕೆ
ಜಮೀನು ಸಂಬಂಧ ಎರಡು ವರ್ಷಗಳ ಹಿಂದೆ ಒಂದ್ ಕೇಸ್ ನಡೆಯುತ್ತಿತ್ತು. ಎರಡು ವರ್ಷದ ಹಿಂದೆಯೇ ಕೇಸ್ ಕೂಡ ಕ್ಲೋಸ್ ಆಗಿತ್ತು. ಆದರೆ ಎರಡು ತಿಂಗಳ ಹಿಂದೆ ಎಸ್‌ಐ ಬೇಬಿ ಓಲೆಕಾರ್ ಕರೆ ಮಾಡಿದರು. ನಿಮ್ ಕೇಸ್ ಪೆಂಡಿಂಗ್ ಇದೆ ಬನ್ನಿ ಮಾತನಾಡಬೇಕು ಎಂದು ಹೇಳಿದರು. ನಾವು ಹೋಗಿ ಹೇಳಿದ್ವಿ, ಎರಡು ವರ್ಷದ ಹಿಂದೆಯೇ ಕೇಸ್ ಕ್ಲೋಸ್ ಆಗಿದೆ ಮೇಡಂ ಅಂತಾ. ಆದರೆ ಇಲ್ಲ ಈ ಕೇಸ್ ಇನ್ವೆಷ್ಟಿಗೇಷನ್ ಮಾಡ್ಬೇಕು ಮೂರು ಲಕ್ಷ ಆಗುತ್ತೆ ಅಂತಾ ಹೇಳಿದ್ದರು. ನಾವು ಅಷ್ಟು ಆಗಲ್ಲ ಅಂತಾ ಹೇಳಿದ್ವಿ, ಕೊನೆಗೆ ಒಂದು ಲಕ್ಷ ತಂದ್ಕೊಡಿ ಅಂತಾ ಹೇಳಿದ್ದರು. ನಿನ್ನೆ ಐವತ್ತು ಸಾವಿರ ತರೋಕೆ ಹೇಳಿದ್ದರು, ನಿನ್ನೆ ಐವತ್ತು ಸಾವಿರ ತಂದಾಗ ಸಿಬ್ಬಂದಿ ಮೇಡಂ ಇಲ್ಲ ನಾಳೆ ಬನ್ನಿ ಅಂದಿದ್ದರು. ಇವತ್ತು ಒಂದು ಲಕ್ಷ ಸಮೇತ ಇವತ್ತು ಬಂದಿದ್ದೆವು. ಎಸಿಬಿಗೆ ದೂರು ನೀಡಿ ಬಂದಿದ್ವಿ, ಆಗ ಎಸಿಬಿ ಅಧಿಕಾರಿಗಳು ಬಂದಾಗ ಬೇಬಿ ಓಲೆಕಾರ್ ದುಡ್ಡು ಕೊಟ್ಟಿಲ್ಲ ಅಂತಾ ನಾಟಕ ಆಡಿದ್ದರು.
ಎಸಿಬಿ ಅಧಿಕಾರಿಗಳು ಹುಡುಕಾಡಿ ದುಡ್ಡು ತೆಗೆದಾಗ ತಲೆ ಸುತ್ತಿರೋತರ ನಾಟಕ ಆಡಿದಾರೆ. ಈಗ ಅವರನ್ನು ಆಸ್ಪತ್ರೆಗೆ ಕರ್ಕೊಂಡ್ ಹೋಗಿದಾರೆ ಎಂದು ದೂರುದಾರರ ಸಹೋದರ ಲಕ್ಷ್ಮೀ ನಾರಾಯಣ್ ಹೇಳಿಕೆ.