ಸರಳ ವಾಸ್ತು ಗುರೂಜಿ ಹತ್ಯೆ ಬಗ್ಗೆ ಹುಬ್ಬಳ್ಳಿ ಕಮೀಷನರ್ ಹೇಳಿದ್ದೇನು?

ಹುಬ್ಬಳ್ಳಿ, ಜು. 07: ಸರಳವಾಸ್ತು ಗುರೂಜಿ ಚಂದ್ರಶೇಖರ ಸ್ವಾಮೀಜಿ ಹತ್ಯೆಯ ಮೂಲ ಕಾರಣ ಹುಡುಕಲು ಹುಬ್ಬಳ್ಳಿ ಧಾರವಾಡ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗುರೂಜಿ ಬಳಿ ಕೆಲಸ ಬಿಟ್ಟ ನಂತರ ಸ್ವಂತ ಕೆಲಸ ಮಾಡುತ್ತಿದ್ದ ಆರೋಪಿಗಳ ವ್ಯವಹಾರಕ್ಕೆ ಸ್ವಾಮೀಜಿ ತುಂಬಾ ಅಡ್ಡಿ ಪಡಿಸಿದ್ದು, ಇದರಿಂದ ಉಂಟಾದ ಹಗೆತನದಿಂದಾಗಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ.
ಬಂಧಿತ ಆರೋಪಿ ಮಂಜುನಾಥ್ ದುಮ್ಮವಾಡ ಹಾಗೂ ಮಾಹಾಂತೇಶ್ ಶಿರೂರ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಬಂಧಿತ ಮಹಾಂತೇಶ್ ಹಾಗೂ ಮಂಜುನಾಥ್ ಅವರ ಮನೆಯಲ್ಲಿ ಕೆಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹತ್ಯೆಗೆ ನಿಖರ ಕಾರಣವನ್ನು ಪತ್ತೆ ಮಾಡಲು ಪೊಲೀಸರು ಹರ ಸಾಹಸ ಮಾಡುತ್ತಿದ್ದಾರೆ. ಕಳೆದ 30 ತಾಸಿನಿಂದ ಅಜ್ಞಾತ ಸ್ಥಳದಲ್ಲಿ ಇಬ್ಬರು ಅರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
2016 ರಲ್ಲಿ ಚಂದ್ರಶೇಖರ್ ಗುರೂಜಿ ಅವರಿಂದ ಕೆಲಸ ಬಿಟ್ಟು ಹೊರ ಬಂದಿದ್ದ ಆರೋಪಿಗಳು ಪುನಃ ಕೆಲಸಕ್ಕೆ ಸೇರುವ ಪ್ರಯತ್ನ ನಡೆಸಿ ವಿಫಲರಾಗಿದ್ದರು ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಸ್ವಾಮೀಜಿಯ ಅಸ್ತಿಯನ್ನು ಹೊಡೆಯಲು ರೂಪಿಸಿದ ಸಂಚಿನ ಭಾಗವಾಗಿ ಕೊಲೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಆದರೆ ಆರೋಪಿಗಳ ಹೇಳಿಕೆಗೂ, ಕೃತ್ಯದ ಹಿಂದಿನ ಸತ್ಯಕ್ಕೂ ಸಾಮ್ಯತೆ ಬರುತ್ತಿಲ್ಲ. ಈವರೆಗೂ ನಾನಾ ಗಾಳಿ ಸುದ್ದಿ ಹರಿದಾಡುತ್ತಿವೆ. ವಾಸ್ತವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ನಿರಂತರವಾಗಿ ಅರೋಪಿಗಳನ್ನು ಪ್ರಶ್ನೆ ಮಾಡಿ ಬಾಯಿ ಬಿಡಿಸುವ ಪ್ರಯತ್ನ ನಡೆಸಿದೆ.
ಚಂದ್ರಶೇಖರ್ ಗುರೂಜಿ ಹತ್ಯೆಯ ಸಂಬಂಧ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್, “ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಸಂಜೆ ವೇಳೆಗೆ ಅರೋಪಿಗಳು ಅಸಲಿ ಕಾರಣ ಹೇಳಲಿದ್ದಾರೆ. ಅತಿ ಶೀಘ್ರದಲ್ಲಿಯೇ ಹತ್ಯೆಯ ರಹಸ್ಯದ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ಮಾಡಿದ್ದ ಚಂದ್ರಶೇಖರ ಗುರೂಜಿ, ವಾಸ್ತುವನ್ನು ಆಯ್ಕೆ ಮಾಡಿಕೊಂಡಿದ್ದರು. ಸರಳ ವಾಸ್ತು ಗುರೂಜಿ ಅಂತಲೇ ರಾಜ್ಯದಲ್ಲಿ ಖ್ಯಾತಿ ಪಡೆದಿದ್ದರು. ರಿಯಲ್ ಎಸ್ಟೇಟ್, ಐಟಿ ಕಂಪನಿ ಸ್ಥಾಪನೆ, ವಾಸ್ತು, ಟಿವಿ ಚಾನೆಲ್ ಹೀಗೆ ನಾನಾ ಕ್ಷೇತ್ರದಲ್ಲಿ ಸ್ವಾಮೀಜಿ ಹೂಡಿಕೆ ಮಾಡಿದ್ದರು.
ಸ್ವಾಮೀಜಿ ಬಳಿ ಕೆಲಸ ಮಾಡಿದ್ದ ಇಬ್ಬರು ಅರೋಪಿಗಳು ಹೋಟೆಲ್ ನಲ್ಲಿ ರಾಜಾರೋಷವಾಗಿ ಸ್ವಾಮೀಜಿ ಅವರ ದೇಹಕ್ಕೆ ತಿವಿದು ಹತ್ಯೆ ಮಾಡಿದ್ದರು. ಹತ್ಯೆಯ ವಿಡಿಯೋ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆ ಬಳಿಕ ಇಬ್ಬರು ಅರೋಪಿಗಳು ಮುಂಬಯಿಗೆ ತೆರಳುವ ಮಾರ್ಗದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.