ಬಾಲಿವುಡ್ ನಟ ರಾಜ್ ಬಬ್ಬರ್‌ಗೆ ಎರಡು ವರ್ಷ ಜೈಲು ಶಿಕ್ಷೆ

ಲಕ್ನೋ: ಇಪ್ಪತ್ತಾರು ವರ್ಷ ಹಳೆಯ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಅವರಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು timesofindia.com ವರದಿ ಮಾಡಿದೆ.
ಚುನಾವಣಾ ಅಧಿಕಾರಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಬ್ಬರ್‌ಗೆ ಈ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆ ಪ್ರಕಟವಾಗುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಬಬ್ಬರ್ ಅವರನ್ನು ಬಳಿಕ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ಘಟನೆ ನಡೆದ ಸಂದರ್ಭ ರಾಜ್ ಬಬ್ಬರ್ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದರು. ಎಂಪಿ/ಎಂಎಲ್‍ಎ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಕಟಿಸಿದ್ದು, 1996ರಲ್ಲಿ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಅಧಿಕೃತ ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಗಿದೆ.
ಬಬ್ಬರ್ ಈ ಚುನಾವಣೆಯಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಸೋಲು ಅನುಭವಿಸಿದ್ದರು. ಆ ಬಳಿಕ ವಾಜಪೇಯಿ 1996ರ ಮೇ 16ರಿಂದ 16 ದಿನಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ಎರಡು ವರ್ಷ ಜೈಲು ಶಿಕ್ಷೆ ಜತೆಗೆ 6500 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಪ್ರಕರಣದ ಸಹ ಆರೋಪಿ ಅರವಿಂದ್ ಸಿಂಗ್ ಯಾದವ್ ವಿಚಾರಣೆಯ ನಡುವೆ ಮೃತಪಟ್ಟಿದ್ದರು.
ಚುನಾವಣಾ ಅಧಿಕಾರಿ ಶ್ರೀಕೃಷ್ಣ ಸಿಂಗ್ ರಾಣಾ ಅವರು ಬಬ್ಬರ್, ಯಾದವ್ ಮತ್ತು ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಮತಗಟ್ಟೆಗೆ ನುಗ್ಗಿದ ಬಬ್ಬರ್ ಹಾಗೂ ಅವರ ಬೆಂಬಲಿಗರು ರಿಗ್ಗಿಂಗ್ ಆರೋಪವನ್ನು ಅಲ್ಲಗಳೆದು, ಮಾಹಿತಿದಾರರ ಮೇಲೆ ಮತ್ತು ಶಿವಕುಮಾರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.