ಮುಂಬಯಿ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ವಿರುದ್ಧ ಎಫ್ಐಆರ್

ನವದೆಹಲಿ: ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ಮತ್ತು ಮಾಜಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್‌ಎಸ್‌ಇ) ಮುಖ್ಯ ಕಾರ್ಯನಿರ್ವಾಹಕ ಚಿತ್ರಾ ರಾಮಕೃಷ್ಣ ವಿರುದ್ಧ ಕೇಂದ್ರೀಯ ತನಿಖಾ ದಳ ಅಥವಾ ಸಿಬಿಐ, ಷೇರು ಮಾರುಕಟ್ಟೆ ಉದ್ಯೋಗಿಗಳ ಅಕ್ರಮ ಫೋನ್ ಟ್ಯಾಪಿಂಗ್ ಆರೋಪದ ಮೇಲೆ ಹೊಸ ಪ್ರಕರಣ ದಾಖಲಿಸಿದೆ.
ಎನ್‌ಎಸ್‌ಇ ಮಾಜಿ ಸಿಇಒ ರವಿ ನಾರಾಯಣ್ ಅವರನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ದೂರಿನ ಮೇರೆಗೆ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ರಾಜ್ಯಗಳ 20 ಸ್ಥಳಗಳಲ್ಲಿ ಸಂಜಯ್ ಪಾಂಡೆಗೆ ಸಂಬಂಧಿಸಿದ ಆಸ್ತಿಗಳನ್ನು ಸಿಬಿಐ ಶೋಧ ನಡೆಸುತ್ತಿದೆ.
ಈ ಪ್ರಕರಣ ಕುರಿತಂತೆ ಕೇಂದ್ರೀಯ ತನಿಖಾ ದಳವು ಮುಂಬೈ, ಪುಣೆ ಮತ್ತು ದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸುತ್ತಿದೆ. 2009 ಮತ್ತು 2017ರಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್‌ಗಳನ್ನು ಚಿತ್ರಾ ರಾಮಕೃಷ್ಣ ಮತ್ತು ಪಾಂಡೆ ಅವರು ಅಕ್ರಮವಾಗಿ ಟ್ಯಾಪ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಜಯ್ ಪಾಂಡೆ ಸ್ಥಾಪಿಸಿದ ಐಸೆಕ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 2009-17ರ ಅವಧಿಯಲ್ಲಿ ಸ್ಟಾಕ್ ಎಕ್ಸ್ ಚೇಂಜ್‌ಗಳ ಉದ್ಯೋಗಿಗಳ ಫೋನ್‌ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಮಾರ್ಚ್ 2001 ರಲ್ಲಿ ಅವರು ಸೇವೆಗೆ ರಾಜೀನಾಮೆ ನೀಡಿದ ನಂತರ ಸಂಜಯ್ ಪಾಂಡೆ ಅವರು ಕಂಪನಿಯನ್ನು ಸ್ಥಾಪಿಸಿದರು. ಅವರು ಮೇ 2006 ರಲ್ಲಿ ಅದರ ನಿರ್ದೇಶಕ ಸ್ಥಾನ ತೊರೆದರು ನಂತರ ಅವರ ಮಗ ಮತ್ತು ತಾಯಿ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡರು.