ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

ಬೆಂಗಳೂರು,ಜು.9-ಬಿಜೆಪಿ ಬೆಂಬಲಿತ ಎನ್‍ಡಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ಮತ ಯಾಚನೆಗಾಗಿ ನಾಳೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಭಗವಂತ ಕೂಬ, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು ಹಾಜರಿರಲಿದ್ದಾರೆ.
ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‍ನಲ್ಲಿ ಸಭೆ ನಡೆಯಲಿದ್ದು, ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ತಮಗೆ ಮತ ಹಾಕಬೇಕೆಂದು ದ್ರೌಪದಿ ಮುರ್ಮು ಅವರು ಮನವಿ ಮಾಡಲಿದ್ದಾರೆ. ಬೆಂಗಳೂರಿಗೆ ಮೊದಲ ಬಾರಿಗೆ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಅವರನ್ನು ವಿಶಿಷ್ಟವಾಗಿ ಬರಮಾಡಿಕೊಳ್ಳಲು ತೀರ್ಮಾನಿಸಿದೆ.
ಈಗಾಗಲೇ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದ್ದು, ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ಸಿಎಂ ಹಾಗೂ ಕೆಲವು ಪ್ರಮುಖ ನಾಯಕರು ಬರಮಾಡಿಕೊಳ್ಳಲಿದ್ದಾರೆ. ನಂತರ 20 ಮಂದಿ ಆದಿವಾಸಿ ಹಾಗೂ ಕಲಾ ತಂಡಗಳು ಅವರನ್ನು ಆದಿವಾಸಿ ಸಂಪ್ರದಾಯದಂತೆ ಸ್ವಾಗತ ಕೋರಲಿದ್ದಾರೆ. ಬಳಿಕ ಶಾಂಘ್ರಿಲಾ ಹೋಟೆಲ್‍ನ ಹೊರಭಾಗದಲ್ಲಿ ಸುಮಾರು 2500 ಮಹಿಳೆಯರು, ಮಹಿಳಾ ಮೋರ್ಚಾ ಬಿಜೆಪಿ ಎಸ್ಸಿ ಘಟಕ, ಹಿಂದುಳಿದ ವರ್ಗಗಳ ಘಟಕ ಸೇರಿದಂತೆ ಮತ್ತಿತರರು ವಿಶಿಷ್ಟವಾಗಿ ಬರಮಾಡಿಕೊಳ್ಳಲಿದ್ದಾರೆ.
ಪ್ರಮುಖರ ಜೊತೆ ನಡೆಯುವ ಸಭೆಯಲ್ಲಿ ದ್ರೌಪದಿ ಮುರ್ಮು ಅವರು ಮತಯಾಚನೆ ಮಾಡಲಿದ್ದು, ತಮಗೆ ಮತ ಹಾಕಬೇಕೆಂದು ಪಕ್ಷದ ಎಲ್ಲ ಮುಖಂಡರಿಗೂ ಮನವಿ ಮಾಡಲಿದ್ದಾರೆ.
ಜೆಡಿಎಸ್ ಬೆಂಬಲ: ಇನ್ನು ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಕೂಡ ಬೆಂಬಲ ನೀಡುವ ಸಾಧ್ಯತೆ ಇದೆ. ಬೆಂಗಳೂರಿನ ಭೇಟಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಈವರೆಗೂ ದೃಢಪಟ್ಟಿಲ್ಲ. ಈ ಹಿಂದೆ ಜೆಡಿಎಸ್ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.