3 – 4 ದಿನ ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

Heavy Rain | 3 – 4 ದಿನ ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಮುಂದುವರೆದಿದ್ದು, ಮಹಾ ಮಳೆಯಿಂದ ಕೃಷ್ಣಾ ನದಿ ಒಳ ಹರಿವು ಹೆಚ್ಚಳವಾಗಿದೆ.
ಕೃಷ್ಣಾ ನದಿಗೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನ ಹಿಪ್ಪರಗಿ ಬ್ಯಾರೇಜನಿಂದ ಹೊರ ಬಿಡಲಾಗುತ್ತಿದೆ.
ಹೀಗಾಗಿ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಯಡೂರು ಕಲ್ಲೋಳ, ಮಲ್ಲಿಕವಾಡ ದತ್ತವಾಡ, ಕಾರದಗಾ ಭೋಜ ಸೇತುವೆಗಳು ಜಲಾವೃತಗೊಂಡಿವೆ.
ಇತ್ತ ಘಟಪ್ರಭಾ, ಮಲಪ್ರಭಾ ನದಿ ಒಳ ಹರಿವು ಹೆಚ್ಚಳವಾಗಿದ್ದು, ಇನ್ನೂ ಮೂರನಾಲ್ಕು ದಿನ ಹೀಗೆ ಮಳೆ ಮುಂದುವರೆಯಲಿದೆ.
ಆದ್ದರಿಂದ ನದಿ ಪಾತ್ರದ ಜನರಲ್ಲಿ ಅರ್ಲಟ್ ಆಗಿ ಇರಲು ಸೂಚನೆ ನೀಡಲಾಗಿದೆ.
ಇನ್ನೂ ಮೂರ್ನಾಲ್ಕು ದಿನ ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಗೆ 69 ಸಾವಿರ ಕ್ಯೂಸೆಕ್ಸ್ ನಷ್ಟು ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.
ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ಕೇವಲ ಶೇಕಡ 22ರಷ್ಟು ನೀರು ಸಂಗ್ರಹವಾಗಿದೆ.
ಹಿಡಕಲ್ ಜಲಾಶಯದಲ್ಲಿ ಕೇವಲ ಶೇಕಡ 17.5ರಷ್ಟು, ನವಿಲುತೀರ್ಥ ಜಲಾಶಯದಲ್ಲಿ ಶೇಕಡಾ 34ರಷ್ಟು ನೀರು ಸಂಗ್ರಹವಾಗಿದೆ.
ಎಷ್ಟೇ ನೀರು ಒಳಹರಿವು ಬಂದರೂ ಡ್ಯಾಂಗಳಲ್ಲಿ ಸಂಗ್ರಹ ಸಾಮರ್ಥ್ಯ ಇದೆ.
ಮಾರ್ಕಂಡೇಯ ಜಲಾಶಯದಲ್ಲಿಯೂ ಸಹ ಶೇಕಡ 36ರಷ್ಟು ನೀರು ಸಂಗ್ರಹವಾಗಿದೆ.
ಸದ್ಯದ ಮಟ್ಟಿಗೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ತುಂಬಾ ಮಳೆ ಬಂದ್ರೆ, ಡ್ಯಾಂನಿಂದ ನೀರು ಬಿಟ್ರೆ ಸಮಸ್ಯೆ ಆಗುತ್ತೆ.
ಕರ್ನಾಟಕ ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿವೆ. ಖಾನಾಪುರ ತಾಲೂಕಿನಲ್ಲಿ ಒಂದು ಶಾಲೆಗೆ ಹಾನಿಯಾಗಿದೆ.
ಎರಡು ಹೆಕ್ಟೇರ್ ಪ್ರದೇಶದಲ್ಲಿ ಬಾಳೆಹಣ್ಣು, ತರಕಾರಿ ಬೆಳೆ ನಾಶವಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಹಳ ದಿನ ಬಂದ್ರೆ ಸಮಸ್ಯೆ ಆಗುತ್ತೆ ಎಂದು ಡಿಸಿ ನಿತೇಶ ಪಾಟೀಲ್ ತಿಳಿಸಿದ್ದಾರೆ.