ಪತಿಯ ಮೃತದೇಹ ಮನೆಯಲ್ಲೇ ಬಿಟ್ರು.. ಆಸ್ತಿಗಾಗಿ ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದ ಪತ್ನಿಯರು!

ಆಸ್ತಿ ಮೇಲಿನ ವ್ಯಾಮೋಹ- ಪತಿ ಶವ ಮನೇಲಿ, ಇಬ್ಬರು ಪತ್ನಿಯರು ತಹಶೀಲ್ದಾರ್ ಕಚೇರಿಯಲ್ಲಿ-ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ವಿಚಿತ್ರ ಘಟನೆ
ಜಗಿತ್ಯಾಲ(ತೆಲಂಗಾಣ): ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಸಿರಿವಂತ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅಭಿನಯಿಸಿರುವುದು ಎಲ್ಲರಿಗೂ ತಿಳಿದ ವಿಚಾರ.
ಈ ಸಿರಿವಂತ ಸಿನಿಮಾದ ಕ್ಲೈಮ್ಯಾಕ್ಸ್ ಎಲ್ಲರ ಮನಕಲುಕುವಂತಿದೆ. ಕ್ಲೈಮ್ಯಾಕ್ಸ್ನಲ್ಲಿ ವಿಷ್ಣುವರ್ಧನ ಅಂತ್ಯಕ್ರಿಯೆ ವೇಳೆ ದೊಡ್ಡಣ್ಣ ಅಡ್ಡಿಪಡಿಸುತ್ತಾರೆ. ನನ್ನ ಬಳಿ ತೆಗೆದುಕೊಂಡಿದ್ದ ಸಾಲವನ್ನು ತೀರಿಸುವವರೆಗೂ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲವೆಂದು ಹಠ ಹಿಡಿಯುತ್ತಾರೆ. ಇಂತಹುದೇ ಘಟನೆಯೊಂದು ಜಿಲ್ಲೆಯಲ್ಲಿ ಕಂಡುಬಂದಿದೆ.
ಈ ಘಟನೆ ಸ್ವಲ್ಪ ಭಿನ್ನವಾಗಿದೆ. ಇಲ್ಲಿ ಗಂಡ ಸಾವನ್ನಪ್ಪಿದ್ದು, ಹೆಂಡ್ತಿಯರಿಬ್ಬರು ತಮ್ಮ ಗಂಡನ ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಮಾನವ ಸಂಬಂಧಗಳು ಆರ್ಥಿಕ ಸಂಬಂಧಗಳಾಗಿ ಬದಲಾಗುತ್ತಿವೆ ಎಂದು ಹಿರಿಯರು ಹೇಳಿದ್ದು ನಿಜ. ನಿನ್ನೆಯವರೆಗೂ ಆಸ್ತಿಗಾಗಿ ತಂದೆ-ತಾಯಿ, ಅಣ್ಣ-ತಮ್ಮಂದಿರ ನಡುವೆ ಜಗಳ, ಕೊಲೆಗಳನ್ನು ನೋಡಿದ್ದೇವೆ. ಮೃತದೇಹವನ್ನು ರಸ್ತೆಯಲ್ಲಿ ಇಟ್ಟು ಆಸ್ತಿ ಹಸ್ತಾಂತರಕ್ಕೆ ಜಗಳವಾಡುವುದನ್ನು ಕೇಳಿದ್ದೇವೆ. ಆದರೆ ಮೃತ ಪತಿಯ ಅಂತ್ಯ ಸಂಸ್ಕಾರ ಮಾಡಬೇಕಿದ್ದ ಪತ್ನಿಯರಿಬ್ಬರು ಆಸ್ತಿ ಹಂಚಿಕೆಗೋಸ್ಕರ ಅಡ್ಡಿಪಡಿಸಿರುವ ಘಟನೆ ಕೋರುಟ್ಲ ತಾಲೂಕಿನ ಐಲಾಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ನಿವಾಸಿ ನರಸಿಂಹುಲು ಕೆಲ ದಿನಗಳಿಂದ ಕೋರುಟ್ಲದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಹೆಂಡತಿಯರು. ನರಸಿಂಹುಲು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳನ್ನು ಪತ್ನಿಯರಿಬ್ಬರು ಒಂದಾಗಿ ನೆರವೇರಿಸಬೇಕಾಗಿತ್ತು. ಆದ್ರೆ ಆಸ್ತಿಯಲ್ಲಿ ಪಾಲಿಗಾಗಿ ಇಬ್ಬರು ಹೆಂಡತಿಯರು ಮೃತದೇಹದ ಮುಂದೆ ಜಗಳವಾಡಿದ್ದಾರೆ.
ಪತಿಯ ಆಸ್ತಿ ಹಸ್ತಾಂತರ ವಿಷಯದಲ್ಲಿ ಎರಡನೇ ಪತ್ನಿ ಭಾರತಿಗೆ ಅನ್ಯಾಯವಾಗಲಿದೆ ಎಂಬ ಉದ್ದೇಶದಿಂದ ಇಬ್ಬರ ಪರವಾಗಿ ಹಿರಿಯರು, ಸಂಬಂಧಿಕರು ಮಧ್ಯಪ್ರವೇಶಿಸಿ ಮೂರು ಎಕರೆ ಕೃಷಿ ಭೂಮಿ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದ್ರೂ ಸಹ ಇದು ಇಲ್ಲಿಗೆ ಮುಗಿಯಲಿಲ್ಲ. ಜಮೀನು ನೋಂದಣಿಯಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಭಾರತಿ ಹಠ ಹಿಡಿದರು.
ಹೀಗಾಗಿ ಅವರಿಬ್ಬರು ತಮ್ಮ ಗಂಡನ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಆಸ್ತಿ ನೋಂದಣಿಗಾಗಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಮೊದಲ ಪತ್ನಿ ಹೆಸರಲ್ಲಿದ್ದ ಮೂರು ಎಕರೆ ಕೃಷಿ ಜಮೀನು ಎರಡನೇ ಪತ್ನಿ ಹೆಸರಿಗೆ ವರ್ಗಾವಣೆಯಾದ ಬಳಿಕ ಮನೆಗೆ ಬಂದು ಪತಿಯ ಅಂತ್ಯಕ್ರಿಯೆ ನೆರವೇರಿಸಿದರು. ಈ ಬಗ್ಗೆ ತಿಳಿದ ಜನರು ಹೌಹಾರಿದ್ದಾರೆ.