ಪಿಎಸ್‌ಐ ನೇಮಕಾತಿ ಅಕ್ರಮ: ಪೌಲ್ ಡೈರಿಯಲ್ಲಿ ಪ್ರಭಾವಿಗಳ ಹೆಸರು

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ಅವರಿಗೆ ಸೇರಿದ್ದು ಎನ್ನಲಾದ ಡೈರಿಯನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದರಿಂದಾಗಿ ಪ್ರಕರಣದ ತನಿಖೆಗೆ ಪ್ರಮುಖ ತಿರುವೊಂದು ಸಿಕ್ಕಿದಂತಾಗಿದೆ.
ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮ್ರಿತ್ ಪೌಲ್, ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಅಂಶಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದರೆಂಬ ಮಾಹಿತಿ ಗೊತ್ತಾಗಿದೆ. ಕೆಲವುಅಧಿಕಾರಸ್ಥರು, ರಾಜಕೀಯ ಪಕ್ಷಗಳ ಮುಖಂಡರು, ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಭಾವಿಗಳ ಹೆಸರು ಡೈರಿಯಲ್ಲಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.
‘ಪೌಲ್ ಅವರ ಸಹಕಾರ ನಗರದಲ್ಲಿರುವ ಮನೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್ (ತೋಟದ ಮನೆ) ಹಾಗೂ ಕಚೇರಿ ಮೇಲೆ ಇತ್ತೀಚೆಗಷ್ಟೇ ದಾಳಿ ಮಾಡಲಾಗಿತ್ತು. ಡೈರಿ ಹಾಗೂ ಇತರೆ ದಾಖಲೆಗಳನ್ನು ಲಭ್ಯವಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.
‘ಪಿಎಸ್‌ಐ ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಕಚೇರಿಯಿಂದ ಸ್ಥಳಾಂತರಿಸಲಾಗಿದೆ. ಆ ಪೈಕಿ ಡೈರಿ ಹಾಗೂ ಕೆಲ ದಾಖಲೆಗಳು ಮಾತ್ರ ಸಿಕ್ಕಿವೆ’ ಎಂದೂ ತಿಳಿಸಿವೆ.
ಅಭ್ಯರ್ಥಿಗಳ ಹೆಸರು ಸಮೇತ ಉಲ್ಲೇಖ: ‘ಪ್ರಭಾವಿಗಳು, ತಮ್ಮ ‘ಆಪ್ತ’ರ ನೇಮಕಾತಿ ಆಗಬೇಕೆಂದು ಪೌಲ್ ಅವರಿಗೆ ಸೂಚಿಸಿದ್ದರು. ಅವರ ಮೌಖಿಕ ಆಜ್ಞೆ ಪಾಲಿಸಿದ್ದ ಪೌಲ್, ಯಾವ ಅಭ್ಯರ್ಥಿಗಳ ಹೆಸರನ್ನು ಯಾರ್ಯಾರು ಶಿಫಾರಸು ಮಾಡಿದ್ದಾರೆ ಎಂದು ಹೆಸರು/ಹುದ್ದೆ ಸಹಿತ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಎಡಿಜಿಪಿ ಅವರ ಅಸಲಿ ಕೈ ಬರಹ ಹಾಗೂ ಡೈರಿಯಲ್ಲಿರುವ ಕೈ ಬರಹಕ್ಕೂ ಹೊಂದಾಣಿಕೆ ಆಗಬೇಕಿದೆ. ಡೈರಿಯನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದೂ ತಿಳಿಸಿವೆ.