fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Feature articlesInternationalKarnataka NewsNationalStories

ಬಕ್ರೀದ್ ಹಬ್ಬವು ತ್ಯಾಗ- ಬಲಿದಾನದ ಸಂಕೇತ: ಇಂದು ಬಕ್ರೀದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಈದುಲ್ ಅಝ್ಹಾ ಅಥವಾ ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ವಿಶ್ವದ ಸರ್ವ ಮುಸ್ಲಿಮರು ಈ ದಿನದಂದು ಪ್ರವಾದಿ ಇಬ್ರಾಹಿಂ ಅವರ ಪುತ್ರ ಇಸ್ಮಾಯಿಲ್ ಹಾಗೂ ಪತ್ನಿ ಹಾಜಿರಾ ಅವರನ್ನು ಸ್ಮರಿಸುತ್ತಾರೆ. ಹಾಗಾದರೆ, ಅವರ ತ್ಯಾಗ ಬಲಿದಾನ ಏನೆಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಪ್ರವಾದಿ ಇಬ್ರಾಹಿಮರು ದೇವನ ಮೇಲೆ ಇಟ್ಟಿದ್ದ ಅಚಲ ವಿಶ್ವಾಸವನ್ನು ಈ ಹಬ್ಬವು ಪ್ರತಿಪಾದಿಸುತ್ತದೆ.

ದೇವನು ಮಾಡಿದ ಹಲವು ಸತ್ವ ಪರೀಕ್ಷೆಗಳಲ್ಲಿ ಪ್ರವಾದಿ ಇಬ್ರಾಹಿಂ, ಪುತ್ರ ಇಸ್ಮಾಯಿಲ್ ಹಾಗೂ ಪತ್ನಿ ಹಾಜಿರಾ ವಿಜಯಿಯಾಗುತ್ತಾರೆ. ತಾಳ್ಮೆಯ ಸಹನೆಯ ಸಾಕಾರ ಮೂರ್ತಿಯಾಗಿದ್ದ ಪ್ರವಾದಿ ಇಬ್ರಾಹಿಮರು ದೇವನ ಆಜ್ಞೆಯನ್ನು ಶಿರಸಾ ಪಾಲಿಸಿ ದೇವ ಸಂಪ್ರೀತಿಗೆ ಪಾತ್ರರಾದರು. ಅವರು ಇರಾಕ್​ನ ಉರ್ ಎಂಬ ನಗರದಿಂದ ಮಕ್ಕಾ ಎಂಬ ಬಹುದೂರದ ಪ್ರದೇಶಕ್ಕೆ ದೇವನ ಆಜ್ಞೆ ಪ್ರಕಾರ ತನ್ನ ಪತ್ನಿ ಹಾಜಿರಾ ಹಾಗೂ ಹಸುಳೆಯೊಂದಿಗೆ ಹೊರಡುತ್ತಾರೆ. ಪ್ರವಾದಿ ಇಬ್ರಾಹಿಮರಿಗೆ ಈ ಮಗು ಅನುಗ್ರಹವಾಗಿ ಲಭಿಸಿತು.

ಅವರು ತನಗೊಂದು ಸಂತಾನವನ್ನು ಕರುಣಿಸು ಎಂದು ದೇವರಲ್ಲಿ ಮೊರೆ ಇಟ್ಟಾಗ ದೇವನ ಅನುಗ್ರಹವಾಗಿ ಈ ಮಗು ಜನಿಸಿತ್ತು. ಹೀಗೆ ದೊರೆತ ಮಗುವನ್ನು ಪತ್ನಿ ಹಾಜಿರಾ ಜೊತೆ ದೇವಾಜ್ಞೆಯ ಪ್ರಕಾರ ನಿರ್ಜನ ಪ್ರದೇಶದಲ್ಲಿ ತೊರೆದು ಬರಬೇಕೆಂಬುದು ದೇವನ ಆಜ್ಞೆಯಾಗಿತ್ತು. ಒಂದೆಡೆ ದೇವನ ಆದೇಶ ಮತ್ತೊಂದೆಡೆ ಪತ್ನಿ ಮತ್ತು ಮಗುವನ್ನು ತೊರೆದು ಬರಬೇಕೆಂಬ ಸತ್ವ ಪರೀಕ್ಷೆ ಎದುರಾಗಿತ್ತು.

ದೇವನ ಮೇಲಿರುವ ಅಚಲ ವಿಶ್ವಾಸದಿಂದ ತನ್ನ ಪತ್ನಿ ಮತ್ತು ಮಗುವನ್ನು ನಿರ್ಜನ ಪ್ರದೇಶದಲ್ಲಿ ತೊರೆದು ಬರುವ ನಿರ್ಧಾರ ತಾಳುತ್ತಾರೆ. ಮಗು ಮತ್ತು ಪತ್ನಿಯನ್ನು ತೊರೆದು ಬರಲು ನಿಂತಾಗ ಹಾಜಿರಾ ಅವರು ಪತಿಯ ಜೊತೆ, ‘ಇದು ದೇವನ ಆದೇಶವೇ’ ಎಂದು ಪ್ರಶ್ನಿಸುತ್ತಾರೆ. ಆಗ ಇಬ್ರಾಹಿಮ್ ಅವರು ‘ಹೌದು. ಇದು ದೇವನ ಆದೇಶವಾಗಿದೆ’ ಎನ್ನುತ್ತಾರೆ. ‘ನಾನು ಮತ್ತು ಈ ನನ್ನ ಹಸುಗೂಸು, ಇಲ್ಲಿ ಇರಬೇಕೆಂಬುದು ದೇವನ ಬಯಕೆ ಎಂದಾದರೆ ಹಾಗೆಯೇ ಆಗಲಿ. ನೀವು ಹೊರಡಿರಿ. ನಮ್ಮನ್ನು ದೇವನು ನೋಡಿಕೊಳ್ಳುವನು’ ಎಂದು ಪತಿಗೆ ಭರವಸೆ ತುಂಬುತ್ತಾ ಬೀಳ್ಕೊಡುತ್ತಾರೆ. ಹೀಗೆ ಅವರು ಅಲ್ಲಿಂದ ಹೊರಟು ಬರುತ್ತಾರೆ.

ದೇವರ ಮೇಲಿನ ಅಚಲವಾದ ವಿಶ್ವಾಸದಿಂದ ಆ ನಿರ್ಜನ ಪ್ರದೇಶದಲ್ಲಿ ಮಗುವಿನೊಂದಿಗೆ ಆ ಮಾತೆ ತಂಗುತ್ತಾರೆ. ಸಮಯ ಸಾಗುತ್ತಿತ್ತು. ಉರಿ ಬಿಸಿಲು ನೆತ್ತಿಗೇರಿತ್ತು. ತಂದಿದ್ದ ಆಹಾರದ ಪಟ್ಟಣ ಖಾಲಿ ಆಯಿತು. ನೀರು ಇಲ್ಲದಾಯಿತು. ಮಗು ಹಸಿವು ದಾಹದಿಂದ ಬಳಲಿತು. ಅದು ಒಂದೇ ಸಮನೆ ಅಳತೊಡಗಿತ್ತು. ಹಾಜಿರಾ ನೀರಿಗಾಗಿ ಹುಡುಕಾಡಿದರೂ ಎಲ್ಲಿಯೂ ನೀರು ಕಾಣಿಸಲಿಲ್ಲ. ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಏಳು ಬಾರಿ ಓಡುತ್ತಾರೆ. ನೀರಿಗಾಗಿ ಹುಡುಕುತ್ತಾರೆ. ಎಲ್ಲಿಯೂ ನೀರಿನ ಕುರುಹುಗಳು ಕಾಣಿಸಲೇ ಇಲ್ಲ. (ಮಕ್ಕಾ ತೆರಳಿರುವ ಹಜ್ ಯಾತ್ರಾರ್ಥಿಗಳು ಹಜ್ ಕರ್ಮ ನಿರ್ವಹಿಸುವಾಗ ಹಾಜಿರಾ ಅವರ ತ್ಯಾಗವನ್ನು ಸ್ಮರಿಸಿ 7 ಬಾರಿ ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಓಡುತ್ತಾರೆ. ಇದನ್ನು ಸಅಯ್ ಎನ್ನುತ್ತಾರೆ. ಇದು ಹಜ್ ನ ಕಡ್ಡಾಯ ಕರ್ಮವಾಗಿದೆ) ಮಗು ಅಳುತ್ತಿರುವಂತೆ ಏಳು ಬಾರಿ ಓಡಿ ಸುಸ್ತಾಗಿ ಬಳಲಿ ಬೆಂಡಾದ ಆ ಮಾತೆ ದೇವನಲ್ಲಿ ಮೊರೆ ಇಡುತ್ತಾರೆ. ಕೈಯೆತ್ತಿ ದೀನರಾಗಿ ಪ್ರಾರ್ಥಿಸುತ್ತಾರೆ. ನಂತರ ಅಲ್ಲಿಂದ ಮಗುವಿನ ಬಳಿ ಮರಳುತ್ತಾರೆ. ಮಗುವನ್ನು ನೋಡುವಾಗ ಅವರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಹೌದು ಮಗುವು ಅತ್ತು ಕಾಲು ಬಡಿಯುವ ಸ್ಥಳದಲ್ಲಿ ಭೂಮಿ ಸೀಳಿ ನೀರು ಚಿಮ್ಮುತ್ತಿರುತ್ತದೆ. ಮಂದಹಾಸದಿಂದ ದೇವರನ್ನು ಸ್ತುತಿಸುತ್ತಾ ನೀರಿನ ಒರತೆಯಿಂದ ಬಂದ ನೀರನ್ನು ಮಗುವಿಗೆ ಕುಡಿಸುತ್ತಾರೆ. ತಾನು ನೀರು ಕುಡಿದು ದಾಹ ತಣಿಸಿಕೊಳ್ಳುತ್ತಾರೆ. ಬಳಿಕ ಸುತ್ತಲೂ ಒಂದು ಕಟ್ಟೆಯನ್ನು ಕಟ್ಟಿ ನೀರನ್ನು ಸಂಗ್ರಹಿಸುತ್ತಾರೆ. ಈ ಪುಟಿಯುತ್ತಿದ್ದ ನೀರನ್ನು ನೋಡಿ ಝುಂ ಝುಂ ಎನ್ನುತ್ತಾರೆ. ಖಿಬ್ತಿ ಭಾಷೆಯಲ್ಲಿ ಝುಂ ಝುಂ ಎಂದರೆ ನಿಲ್ಲು ನಿಲ್ಲು ಎಂಬರ್ಥ ಬರುತ್ತದೆ. ನೀರಿನ ಒರತೆಯನ್ನು ಕಂಡು ತನಗರಿವಿಲ್ಲದೆ ಹಾಜಿರಾರ ಬಾಯಿಂದ ಹೊರಟ ಆ ಪದವಾಗಿದೆ ಝುಂ ಝುಂ. ಆ ನೀರು ಇಂದಿಗೂ ಬತ್ತಿಲ್ಲ. ಈ ಪವಿತ್ರ ಜಲವನ್ನು ವಿಶ್ವದ ಎಲ್ಲ ಸ್ಥಳಗಳಿಂದ ಬರುವ ಭಕ್ತರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಊರಿಗೂ ಕೊಂಡೊಯ್ಯುತ್ತಾರೆ. ಇದು ಹಾಜಿರಾ ಎಂಬ ಕರಿಯ ವರ್ಗದ ಮಹಿಳೆಯ ಮೊರೆಗೆ ದೇವನು ನೀಡಿದ ಅನುಗ್ರಹವಾಗಿದೆ. ಅದೊಂದು ಪವಾಡವಾಗಿ ಇಂದಿಗೂ ಜೀವಂತ ನಿದರ್ಶನವಾಗಿದೆ. ಈ ಹಾಜಿರಾರ ತ್ಯಾಗವನ್ನು ಈ ಹಬ್ಬದ ಸಂದರ್ಭದಲ್ಲಿ ಸ್ಮರಿಸುತ್ತಾರೆ. ಮಕ್ಕಾದ ಕಾಬಾದ ಪರಿಸರದಲ್ಲಿ ಈ ಘಟನೆ ನಡೆದಿದೆ.

ವಿಶ್ವದ ಎಲ್ಲೆಡೆಯಿಂದ ಬರುವ ಹಜ್ ಯಾತ್ರಾರ್ಥಿಗಳು ಈ ಪುಣ್ಯಭೂಮಿಯಲ್ಲಿ ಅವರನ್ನು ಸ್ಮರಿಸುತ್ತಾರೆ. ಇನ್ನು ಈ ಹಬ್ಬವು ಬಲಿದಾನದ ಪ್ರತೀಕವಾಗಿದೆ ಎಂದು ಹೇಳುವುದಾದರೂ ಏಕೆ ಎಂಬ ಪ್ರಶ್ನೆಗಳಿಗೆ ದೃಷ್ಟಿ ಹಾಯಿಸೋಣ. ಇಬ್ರಾಹಿಮರಿಗೆ ಒಮ್ಮೆತಮ್ಮ ಪುತ್ರನನ್ನು ದೇವನಿಗೆ ಬಲಿ ಅರ್ಪಿಸಬೇಕೆಂದು ಕನಸು ಬೀಳುತ್ತದೆ. ಈ ಕನಸನ್ನು ಸಾಕ್ಷಾತ್ಕಾರಗೊಳಿಸಲು ಸತ್ವ ಪರೀಕ್ಷೆಗೆ ಅವರು ಸಿಲುಕುತ್ತಾರೆ. ಹೌದು, ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬೇಕಾಗಿದ್ದ ಏಕೈಕ ಪುತ್ರನನ್ನು ಬಲಿ ಅರ್ಪಿಸಬೇಕೆಂಬ ದೇವನ ಆದೇಶ. ಆದರೆ, ದೇವನ ಆದೇಶದ ಮುಂದೆ ಮಿಕ್ಕೆಲ್ಲವೂ ತೃಣ ಸಮಾನ. ತನ್ನ ಕನಸಿನ ವೃತ್ತಾಂತವನ್ನು ಪುತ್ರ ಇಸ್ಮಾಯಿಲ್ ಜತೆ ಹಂಚಿಕೊಳ್ಳುತ್ತಾರೆ. ಅವರು ಕೂಡ ದೇವನ ಪರಮ ಭಕ್ತರಾಗಿದ್ದರು. ಅವರು ಅದರಿಂದ ಹಿಂದೆ ಸರಿಯಲಿಲ್ಲ. ‘ಅಪ್ಪಾ, ಇದು ದೇವನ ಆದೇಶವೇ ಹಾಗಾದರೆ ನಾನು ಅದಕ್ಕೆ ಸಿದ್ಧ’ ಎನ್ನುತ್ತಾರೆ.

ಹಾಜಿರಾ ಎಂಬ ಆ ಮಾತೆ ಅಂತಹಾ ತರಬೇತಿಯನ್ನು ಆ ಬಾಲಕನಿಗೆ ನೀಡಿದ್ದರು. ಬಲಿದಾನಕ್ಕಾಗಿ ಇಸ್ಮಾಯಿಲ್ ಸಿದ್ಧರಾಗುತ್ತಾರೆ. ಹರಿತವಾದ ಖಡ್ಗದೊಂದಿಗೆ ತಮ್ಮ ಮಗನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗುತ್ತಾರೆ. ಮಗುವನ್ನು ಅಂಗಾತ ಮಲಗಿಸುತ್ತಾರೆ. ಮನಸ್ಸಿನ ಎಲ್ಲಾ ದುಗುಡುಗಳನ್ನು ನೋವುಗಳನ್ನು ಅದುಮಿ ಹಿಡಿಯುತ್ತಾರೆ. ಬಲಿದಾನಕ್ಕೆ ಸಿದ್ಧರಾಗಿ ದೇವನ ನಾಮವನ್ನು ಉಚ್ಚರಿಸುತ್ತಾ ಮಗುವಿನ ಕೊರಳನ್ನು ಕೊಯ್ಯಲು ಪ್ರಾರಂಭಿಸುತ್ತಾರೆ.

ಹರಿತವಾದ ಖಡ್ಗವದು. ಎಷ್ಟೇ ಕೊಯ್ದರೂ ಅಲ್ಲಿ ರಕ್ತ ಒಸರಲಿಲ್ಲ, ಗಾಯವಾಗಲಿಲ್ಲ. ಆಗ ದೇವನಿಂದ ಆಶರೀರವಾಣಿಯೊಂದು ಮೊಳಗಿತು. ‘ಇಬ್ರಾಹಿಂ ನೀವು ದೇವನ ಸತ್ವ ಪರೀಕ್ಷೆಯಲ್ಲಿ ವಿಜಯಿಯಾಗಿದ್ದೀರಿ. ನೀವು ಮಗನ ಬದಲಿಗೆ ಒಂದು ಮೇಕೆಯನ್ನು ಬಲಿ ಅರ್ಪಿಸಿರಿ’ ಎಂದು ಆಶರೀರವಾಣಿ ಹೇಳುತ್ತದೆ. ಆಗ ಅಲ್ಲಿ ಮೇಕೆಯೊಂದು ಪ್ರತ್ಯಕ್ಷವಾಗುತ್ತದೆ. ಆ ಮೇಕೆಯನ್ನು ಅವರು ಬಲಿ ನೀಡುತ್ತಾರೆ.

ಹೀಗೆ ಈ ಸತ್ವ ಪರೀಕ್ಷೆಯಲ್ಲಿ ವಿಜಯಿ ಆದ ಇಬ್ರಾಹಿಮರನ್ನು ಸ್ಮರಿಸಿ ವಿಶ್ವದಾದ್ಯಂತದ ಮುಸ್ಲಿಮರು ಈ ಬಕ್ರೀದ್ ದಿನದ ಸಂದರ್ಭದಲ್ಲಿ ಹಬ್ಬದ ಸಂದರ್ಭದಲ್ಲಿ ಮೇಕೆಯನ್ನು ಬಲಿ ನೀಡುತ್ತಾರೆ. ಇದು ಬಲಿದಾನದ ಪ್ರತೀಕವಾಗಿದೆ. ಹೀಗೆ ಪ್ರವಾದಿ ಇಬ್ರಾಹಿಂ ಪುತ್ರ ಇಸ್ಮಾಯಿಲ್ ಅವರನ್ನು ಈ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತದ ಮುಸ್ಲಿಮರ ಆರಾಧನಾ ಕೇಂದ್ರವಾಗಿ ಮೆಕ್ಕಾ ಕಂಗೊಳಿಸುತ್ತದೆ. ಅದು ಇಬ್ರಾಹಿಂ ಹಾಗೂ ಇಸ್ಮಾಯಿಲರು ಇಟ್ಟಿಗೆಯಿಂದ 4000 ವರ್ಷಗಳ ಹಿಂದೆ ಕಟ್ಟಿದ ಕಅಬಾಲಯವಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದಿನ ಈ ಘಟನೆಯು ಇಂದಿಗೂ ಎಂದಿಗೂ ಸ್ಮರಣೀಯ. ವಿಶ್ವದಾದ್ಯಂತದ ಮುಸ್ಲಿಮರು ಈ ಪ್ರವಾದಿ ಇಬ್ರಾಹಿಂ, ಇಸ್ಮಾಯಿಲ್ ಹಾಗೂ ಹಾಜಿರಾರನ್ನು ಎಲ್ಲಾ ಮುಸ್ಲಿಮರು ಸ್ಮರಿಸುವಂತಹ ಅನುಗ್ರಹವನ್ನು ಅವರಿಗೆ ದಯಪಾಲಿಸಿದನು. ಮಕ್ಕಾ ಎಂಬ ಬಂಜರು ಭೂಮಿಯಲ್ಲಿ ನಾಗರಿಕತೆಯ ಫಸಲು ಮೂಡಿತು. ಅಂದಿನಿಂದ ಇಂದಿನವರೆಗೂ ಅದು ಉತ್ಸಾಹದ ನಗರವಾಗಿ ಹೊರಹೊಮ್ಮಿದೆ. ಪ್ರವಾದಿ ಇಬ್ರಾಹಿಂ ಬದುಕು ಏಕದೇವರಾಧನೆಯ ಸಂದೇಶವನ್ನು ನೀಡುತ್ತದೆ. ಹೀಗೆ ಬಕ್ರೀದ್ ಹಬ್ಬವು ತ್ಯಾಗದ ಬಲಿದಾನದ ಸಂಕೇತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: