ಬೆಳಗಾವಿ: ಕುಂದಾನಗರಿಯಲ್ಲಿ ಶ್ರದ್ಧೆ, ಭಕ್ತಿಯಿಂದ ಅದ್ದೂರಿ ಬಕ್ರಿದ್ ಹಬ್ಬಆಚರಣೆ : ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬಕ್ರೀದ್ ಹಬ್ಬವನ್ನು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಮುಸ್ಲಿಂ ಬಾಂಧವರು ಬೆಳಗಾವಿಯಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು.
ಬೆಳಗಾವಿಯ ವಿವಿಧ ಮಸೀದಿಗಳಲ್ಲಿ ಬೆಳಿಗ್ಗೆ ಈದ್ ನಮಾಜನ್ನು ಆಯೋಜನೆ ಮಾಡಲಾಗಿತ್ತು. ಅಂಜುಮನ್ ಸಂಸ್ಥೆ ವತಿಯಿಂದ ನಗರದ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಾರ್ವಜನಿಕ ಈದ್ ನಮಾಜನ್ನು ಮಾಡಲಾಯಿತು.
ಮಳೆ ಇದ್ದರೂ ಸಾಕಷ್ಟು ಜನರು ಈದ್ಗಾ ಮೈದಾನದಲ್ಲಿ ನಡೆದ ನಮಾಜನಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮುಫ್ತಿ ಅಬ್ದುಲ್ ಅಜೀಜ್ ಖಾಜಿ ಬಕ್ರಿದ್ ಹಬ್ಬದ ಮಹತ್ವವನ್ನು ತಿಳಿಸಿದರು. ;
ಈ ತಿಂಗಳಲ್ಲಿ ಲಕ್ಷಾಂತರ ಭಕ್ತರು ನಮ್ಮ ಇಸ್ಲಾಂ ಧರ್ಮದ ಪವಿತ್ರ ಕ್ಷೇತ್ರ ಮಕ್ಕಾಗೆ ಭೇಟಿ ನೀಡಿ ಹಜ್ ಯಾತ್ರೆ ಪೂರ್ಣಗೊಳಿಸುತ್ತಾರೆ. ಅದೇ ರೀತಿ ಇದೇ ದಿವಸ ಪ್ರಾಣಿಯನ್ನು ಬಲಿ ಕೊಡುತ್ತಾರೆ. ಹಾಗಾಗಿ ಬೆಳಗಾವಿಯಲ್ಲಿ ನಾವು ಕೂಡ ಬೇರೆ ಸಮುದಾಯದ ಜನರಿಗೆ ತೊಂದರೆ ಆಗದಂತೆ ಅತ್ಯಂತ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು. ಬಡ ಜನರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಫಿರೋಜ್ ಸೇಠ್, ಅಂಜುಮನ್ ಸಂಸ್ಥೆ ಅಧ್ಯಕ್ಷ ರಾಜು ಸೇಠ್ ಸೇರಿದಂತೆ ಇನ್ನಿತರ ಮುಸ್ಲಿಂ ಮುಖಂಡರು ಬಕ್ರಿದ್ ಹಬ್ಬದ ಶುಭಾಶಯ ಕೋರಿದರು. ಇದೇ ವೇಳೆ ಎಸಿಪಿ ನಾರಾಯಣ ಭರಮನಿ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳೂ ಕೂಡ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಇನ್ನು ಮುಸ್ಲಿಂ ಬಾಂಧವರು ಪರಸ್ಪರ ಬಕ್ರಿದ್ ಹಬ್ಬದ ಶುಭಾಶಯಗಳನ್ನು ಕೋರಿದರು. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಶುಭ್ರ ಬಿಳಿ ಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಇನ್ನು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.