ಉದ್ಯಮಿ ಕೊಲೆ ರಹಸ್ಯ ಬಯಲು:ತಂದೆ ಗಿಫ್ಟ್ ಮಾಡಿದ್ದ ಡೈಮಂಡ್ ರಿಂಗ್ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ

ಜಮ್ಶೆಡ್ಪುರ: ಜಾರ್ಖಂಡ್ನಲ್ಲಿ ನಡೆದ ಉದ್ಯಮಿ ಕನ್ಹಯ್ಯ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಮೃತನ ಮಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೃತ ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ (19), ಆಕೆಯ ಬಾಯ್ಫ್ರೆಂಡ್ ರಾಜ್ವೀರ್ (21), ನಿಖಿಲ್ ಗುಪ್ತ ಮತ್ತು ಸೌರಭ್ ಕಿಸ್ಕು ಎಂದು ಗುರುತಿಸಲಾಗಿದೆ.
ಜೂನ್ 30ರಂದ ಜಾರ್ಖಂಡ್ನ ಆದಿತ್ಯಾಪುರದಲ್ಲಿ ಕನ್ಹಯ್ಯಾ ಸಿಂಗ್ ಕೊಲೆ ನಡೆದಿತ್ತು. ರಾಜ್ವೀರ್ ಜೊತೆಗಿನ ಮಗಳ ಪ್ರೇಮ ಸಂಬಂಧವನ್ನು ಕನ್ಹಯ್ಯ ತೀವ್ರವಾಗಿ ವಿರೋಧಿಸಿದ್ದೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಇಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕೊಲೆಯಾದ ಕನ್ಹಯ್ಯ ಸಿಂಗ್ಜೂನ್ 30 ರಂದು ಹರಿ ಒಮ್ನಗರದಲ್ಲಿರುವ ತನ್ನ ಅಪಾರ್ಟ್ಮೆಂಟ್ ಹೊರಭಾಗದಲ್ಲಿ ಕನ್ಹಯ್ಯ ಸಿಂಗ್ ರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ವಾಹನವೊಂದರಲ್ಲಿ ಘಟನಾ ಸ್ಥಳಕ್ಕೆ ಬಂದ ಮೂವರು ಸದಸ್ಯರಿರುವ ದುಷ್ಕರ್ಮಿಗಳ ಗ್ಯಾಂಗ್, ಕನ್ಹಯ್ಯರತ್ತ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿತ್ತು.
ಐದು ದಿನಗಳ ಕಾಲ ಕೊಲೆಗೆ ಸಂಚು ರೂಪಿಸಿದ್ದ ರಾಜ್ವೀರ್ ಮತ್ತು ಆತನ ದಾಳಿಕೋರರ ತಂಡ, ಅಪರ್ಣಾ ಒಪ್ಪಿಗೆ ಪಡೆದುಕೊಂಡು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ತಂದೆ ಉಡುಗೊರೆಯಾಗಿ ನೀಡಿದ್ದ ಡೈಮಂಡ್ ರಿಂಗ್ ಅನ್ನು ತನ್ನ ಬಾಯ್ಫ್ರೆಂಡ್ಗೆ ನೀಡಿ, ಕೊಲೆ ಮಾಡಲು ಶೂಟರ್ಗಳಿಗೆ ಮುಂಗಡ ಹಣದ ರೂಪದಲ್ಲಿ ಅಪರ್ಣಾ ನೀಡಿದ್ದಳು ಎಂದು ತಿಳಿದುಬಂದಿದೆ.
ತನಿಖಾ ತಂಡವು ಈ ಪ್ರಕರಣವನ್ನು ವೈಜ್ಞಾನಿಕವಾಗಿ ಬಗೆಹರಿಸಿದೆ ಮತ್ತು ಸಹಚರರೊಬ್ಬರ ಬಂದೂಕು, ಖಾಲಿ ಕಾಟ್ರಿಡ್ಜ್‌ಗಳು, ಶೂ ಮತ್ತು ರಕ್ತಸಿಕ್ತ ಶರ್ಟ್ ಮತ್ತು ವಜ್ರದ ಉಂಗುರದಂತಹ ಪುರಾವೆಗಳನ್ನು ಸಹ ಸಂಗ್ರಹಿಸಿದೆ. ಅಪರ್ಣಾ ತನ್ನ ತಂದೆಯ ಸ್ಥಳವನ್ನು ಆರೋಪಿಗೆ ವಾಟ್ಸಾಪ್‌ನಲ್ಲಿ ಒದಗಿಸಿದ್ದಳು ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬನಾದ ಸೌರಭ್ ಕಿಸ್ಕು ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಛೊತ್ರೈ ಕಿಸ್ಕು ಅವರ ಪುತ್ರ ಎಂದು ತಿಳಿದುಬಂದಿದೆ.