ಗೋಕಾಕ್ ಫಾಲ್ಸ ಪ್ರವಾಸಿಗರಿಗೆ ಎಚ್ಚರಿಕೆ ಸಂದೇಶ..! ಪ್ರವಾಸೀ ತಾಣಗಳಿಗೆ ಬಂದಾಗ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು: S.P. ಸಂಜೀವ್ ಪಾಟೀಲ್

ಪ್ರವಾಸೀ ತಾಣಗಳಿಗೆ ಬಂದಾಗ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು. ತಮ್ಮ ಹಾಗೂ ತಮ್ಮ ಜೊತೆ ಬಂದವರ ಕುರಿತಂತೆ ಕಾಳಜಿ ವಹಿಸಬೇಕೆಂದು ಬೆಳಗಾವಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರು ಜನಪ್ರಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನಿಡುತ್ತಿದ್ದಾರೆ. ಇನ್ನು ಅವರ ಸುರಕ್ಷತೆಯನ್ನು ಸ್ವತಃ ಪ್ರವಾಸಿಗರೇ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಇಂದು ಎಸ್‍ಪಿ ಡಾ. ಸಂಜೀವ್ ಪಾಟೀಲ್ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‍ಗೆ ಭೇಟಿ ನೀಡಿ ಪ್ರವಾಸಿಗರ ರಕ್ಷಣೆಯ ದೃಷ್ಠಿಯಿಂದ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮನವಿ ಮಾಡಿದರು.
ರುದ್ರ ರಮಣೀಯವಾಗಿ ಧುಮ್ಮುಕ್ಕುತ್ತಿರುವ ಗೋಕಾಕ ಜಲಪಾತ: ಫೋಟೊಗಾಗಿ ಯುವಕ, ಯುವತಿಯರ ಹುಚ್ಚಾಟ
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸಂಜೀವ್ ಪಾಟೀಲ್, ಬೆಳಗಾವಿ ಪ್ರಾಕೃತಿಕವಾಗಿ ಬಹಳ ಸಂಪದ್ಭರಿತವಾಗಿ ಜಿಲ್ಲೆಯಾಗಿದೆ. ಗೋಕಾಕ್ ಫಾಲ್ಸ್ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಅದನ್ನು ವೀಕ್ಷಣೆ ಮಾಡಲು ಜನಸಾಗರವೇ ಹರಿದು ಬರುತ್ತಿದೆ. ಪ್ರವಾಸಿಗರು ಫಾಲ್ಸ್ ವೀಕ್ಷಣೆ ಮಾಡುವಾಗ ನೀರಿನ ಹತ್ತಿರ ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದರು. ಹಾಗಾಗಿ ಇಂದು ಇಲ್ಲಿಗೆ ಭೇಟಿ ನೀಡಿದ್ದೇವೆ. ಈಗಾಗಲೇ ಪ್ರವಾಸಿಗರು ನೀರಿನ ಹತ್ತಿರಕ್ಕೆ ಹೋಗದಂತೆ ಕ್ರೈಂ ಸೀನ್ ಟೇಪ್ ಕಟ್ಟಿ ಬ್ಯಾರಿಕೇಡ್ ಹಾಕಿ ಯಾರೂ ನೀರಿಗಿಳಿಯದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇನ್ನು ಇಲ್ಲಿ ಕಬ್ಬಿಣದ ಗ್ರಿಲ್‍ನ್ನು ಹಾಕುವಂತೆ ಸ್ಥಳೀಯ ಆಡಳಿತಕ್ಕೆ ಹೇಳಲಾಗಿದೆ. ಇನ್ನು ಪ್ರವಾಸಿಗರೂ ಯಾರೂ ಕೂಡ ತಮ್ಮ ರಕ್ಷಣೆಯನ್ನು ಮೀರಿ ವರ್ತನೆ ಮಾಡಬಾರದು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಪೊಲೀಸರೇ ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಅಂತರ್ ವಿಭಾಗದ ಒಳ ಸಮನ್ವಯವನ್ನು ಮಾಡಿಕೊಳ್ಳುತ್ತೇವೆ. ಭದ್ರತೆಗೆ ಮುಖ್ಯವಾಗಿ ಅವರು ಕ್ರಮ ಕೈಗೊಳ್ಳಬೇಕು. ನಾವು ಏನಿದ್ದರೂ ಅವರ ಗಮನಕ್ಕೆ ತಂದಿದ್ದೇವೆ. ಪ್ರವಾಸಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರವಾಸೀ ತಾಣಗಳಿಗೆ ಬಂದಾಗ ತಮ್ಮ ಹಾಗೂ ತಮ್ಮವರ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಪ್ರವಾಸಿಗರು ಗೋಕಾಕ್ ಫಾಲ್ಸ್‍ನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೂರದ ಸ್ಥಳಗಳಿಂದ ಆಗಮಿಸುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಆಗಮಿಸುತ್ತಿರುವ ಪ್ರವಾಸಿಗರು ಸಖತ್ ಮೋಜು ಮಸ್ತಿ ಮಾಡಿ ಸೇಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇನ್ನು ಪೊಲೀಸ್ ಇಲಾಖೆ ಪ್ರವಾಸಿಗರ ದೃಷ್ಠಿಯಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು ಪ್ರವಾಸಿಗರು ತಮ್ಮ ಕಾಳಜಿಯನ್ನು ತಾವೇ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.