ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆ ಕುಸಿದ ಗರ್ಲಗುಂಜಿ ಶಾಲೆಯ ಹಳೆ ಕೊಠಡಿ

ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆ ಎಲ್ಲೆಡೆ ಅವಾಂತರ ಸೃಷ್ಟಿಯಾಗಿದ್ದು. ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಸರಕಾರಿ ಮರಾಠಿ ಶಾಲೆಯ ಹಳೆಯ ಕಟ್ಟಡದ ಕೊಠಡಿ ಸಂಪೂರ್ಣವಾಗಿ ಕುಸಿದಿದೆ.
ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಈ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿರಲಿಲ್ಲ. ಹೀಗಾಗಿ ಭಾರಿ ಅನಾಹುತ ತಪ್ಪಿದೆ. ಕೊಠಡಿ ರಾತ್ರಿ ವೇಳೆಯಲ್ಲಿ ಕುಸಿದಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಶಾಲೆಯ ಗೋಡೆ ಕುಸಿದು ಕಟ್ಟಡ ನೆಲಕ್ಕುರುಳಿದೆ.
ಇದು ಶಾಲೆಯ ಹಳೆಯ ಕಟ್ಟಡವಾಗಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಮಕ್ಕಳ ಸಂಖ್ಯೆ ಹೆಚ್ಚಿದ್ದಾಗ ಮಾತ್ರ ಈ ಕಟ್ಟಡವನ್ನು ಬಳಸಲಾಗುತ್ತಿತ್ತು. ಆದರೆ ಈಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಕೊಠಡಿಯನ್ನು ಬಳಸುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗಲಿಲ್ಲ. ಶಾಲಾ ದಿನಗಳಾಗಿದ್ದರೆ ಮಕ್ಕಳು ಅಲ್ಲಿ ಆಟವಾಡುವ ಸಾಧ್ಯತೆಯೂ ಇತ್ತು. ಇನ್ನು ಸ್ಥಳಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.