ಮೇಘಸ್ಫೋಟ ಅಮರನಾಥದಲ್ಲಿ: ಕರಾವಳಿಯ 11 ಮಂದಿಯ ತಂಡ ಪಾರು

ಜಮ್ಮು ಕಾಶ್ಮೀರದ ಅಮರನಾಥ ಕ್ಷೇತ್ರದ ಬಳಿ ಶುಕ್ರವಾರ ಸಂಜೆ ಮೇಘ ಸ್ಫೋಟ ಸಂಭವಿಸಿದ್ದು, ಯಾತ್ರೆಗೆಂದು ಮುಂಬಯಿಯಿಂದ ತೆರಳಿದ್ದ ಕರಾವಳಿ ಮೂಲದ 11 ಮಂದಿಯ ತಂಡ ಕೂದಲೆಳೆ ಅಂತರದಲ್ಲಿ ಪವಾಡಸದೃಶವಾಗಿ ಪಾರಾಗಿದ್ದು ಸುರಕ್ಷಿತವಾಗಿದೆ. ತಂಡದಲ್ಲಿದ್ದ ಕಿನ್ನಿಗೋಳಿಯ ಭರತ್ ಶೆಟ್ಟಿ ಅತ್ತೂರು ಅವರು ಅಲ್ಲಿನ ರೋಚಕ ಕ್ಷಣಗಳನ್ನು ಉದಯವಾಣಿಯೊಂದಿಗೆ ಬಿಚ್ಚಿಟ್ಟಿದ್ದಾರೆ.
ಕುಂದಾಪುರ: “ಅಮರನಾಥ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಟೆಂಟ್‌ಗೆ ಮರಳಿದ್ದ ನಾವು ಅಲ್ಲಿಂದ ಹೊರಗೆ ಬಂದ ಕೇವಲ 3 ನಿಮಿಷಗಳಲ್ಲಿ ನಾವಿದ್ದ ಟೆಂಟ್ ಸಹಿತ ಎಲ್ಲವೂ ಮೇಘಸ್ಫೋಟದಲ್ಲಿ ಕೊಚ್ಚಿಕೊಂಡು ಹೋಗಿವೆ. ನಾವು ನಂಬಿದ ದೇವರೇ ನಮ್ಮನ್ನು ಕಾಪಾಡಿದ್ದು…’
ಹೀಗೆಂದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಸದ್ಯ ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದ ಸಮೀಪದ ಸೇನಾ ನೆಲೆಯಲ್ಲಿ ಸುರಕ್ಷಿತವಾಗಿರುವ ಕಿನ್ನಿಗೋಳಿಯ ಭರತ್ ಶೆಟ್ಟಿ ಅತ್ತೂರು ಹೇಳಿಕೊಂಡಿದ್ದಾರೆ.
ಅಮರನಾಥದ ಪವಿತ್ರ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದೆ. ನಾವು ಶುಕ್ರವಾರ ಸಂಜೆ 5 ಗಂಟೆಗೆ ದೇವರ ದರ್ಶನ ಪಡೆದು ಟೆಂಟ್ ಸೇರಿದ್ದೆವು. ಬಳಿಕ ಪರಿಸರವನ್ನು ನೋಡೋಣವೆಂದು ಎಲ್ಲರೂ ಹೊರಗೆ ಬಂದಿದ್ದು, ಸ್ವಲ್ಪ ಹೊತ್ತಿನಲ್ಲಿ ಗುಹೆಯ ಬಳಿ ಒಮ್ಮಿಂದೊಮ್ಮೆಲೇ ದುರಂತ ಸಂಭವಿಸಿತು. ಕಣ್ಣೆದುರೇ 6-7 ಯಾತ್ರಾರ್ಥಿಗಳು ಸಾವನ್ನಪ್ಪಿದರು ಎಂದು ಅಲ್ಲಿನ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
11 ಮಂದಿಯ ತಂಡ
ಉಡುಪಿ ಮತ್ತು ದ.ಕ. ಜಿಲ್ಲೆಯ 11 ಮಂದಿ ಸೇರಿದಂತೆ ಒಟ್ಟು 27 ಮಂದಿಯ ತಂಡ ಮುಂಬಯಿಂದ ಜು. 3ರಂದು ಅಮರನಾಥಕ್ಕೆ ತೆರಳಿತ್ತು. ಭರತ್ ಶೆಟ್ಟಿ ಅತ್ತೂರು, ಪ್ರವೀಣ್ ಶೆಟ್ಟಿ ಕುರ್ಕಾಲು, ವಿಜಯ ಶೆಟ್ಟಿ ಸಿದ್ದಕಟ್ಟೆ, ರಾಜೇಶ್ ಶೆಟ್ಟಿ ಮುನಿಯಾಲು, ಗಣೇಶ್ ಶೆಟ್ಟಿ ಮಿಜಾರು, ಗಣೇಶ್ ಸಾಲ್ಯಾನ್, ಸಂತೋಷ್ ಸಾಲ್ಯಾನ್, ಸದಾನಂದ ಕೋಟ್ಯಾನ್ ಮಲ್ಲಾರು, ಚಂದ್ರಹಾಸ್ ಕೋಟ್ಯಾನ್, ದಿನೇಶ್ ಶೆಟ್ಟಿ ಕಟೀಲು ಹಾಗೂ ನಾಗೇಶ್ ಕೊಂಡಾಣ ತಂಡದಲ್ಲಿದ್ದವರು.
ಕಾಡ ಹಾದಿಯಲ್ಲಿ 20 ಕಿ.ಮೀ. ನಡಿಗೆ
ಘಟನೆ ಸಂಭವಿಸಿದ ಸ್ಥಳದಿಂದ ಜಮ್ಮುವಿನ ಸೇನಾ ಶಿಬಿರವಿದ್ದ ಬಲಾತಲ್ ಗೆ ನಾವು ತೆರಳಬೇಕಿತ್ತು. ಮುಖ್ಯ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದ್ದ ಕಾರಣ ಶುಕ್ರವಾರ ಸಂಜೆ 7 ಗಂಟೆಯಿಂದ ಕಾಡು ದಾರಿಯಲ್ಲಿ ನಡೆಯುತ್ತ ಸಾಗಿದೆವು. ಶನಿವಾರ ಬೆಳಗ್ಗಿನ ಜಾವ 3ರ ಸುಮಾರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿದೆವು. ಸುಮಾರು 20 ಕಿ.ಮೀ.ಗೂ ಹೆಚ್ಚು ದೂರ ಕಗ್ಗತ್ತಲಲ್ಲಿ ನಡೆದೇ ಸಾಗಿದ್ದೆವು. ರವಿವಾರ ವೈಷ್ಣೋದೇವಿಯ ದರ್ಶನ ಪಡೆದಿದ್ದು, ಸೋಮವಾರಕ್ಕೆ ಮುಂಬಯಿಗೆ ಹೋಗಲು ಟಿಕೆಟ್ ಬುಕ್ಕಿಂಗ್ ಮಾಡಿದ್ದು, ಮಂಗಳವಾರ ತಲುಪಲಿದ್ದೇವೆ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.
ಅಮರನಾಥ ಯಾತ್ರೆ ಸ್ಥಗಿತ
ಬೇಸ್‌ಕ್ಯಾಂಪ್‌ನಲ್ಲೇ ಉಳಿದ ಬಂಟ್ವಾಳದ ಯಾತ್ರಿಕರು
ಬಂಟ್ವಾಳ: ಅಮರನಾಥ ಯಾತ್ರೆಗೆ ತೆರಳಿ ಮೇಘಸ್ಫೋಟದ ಕಾರಣಕ್ಕೆ ಅರ್ಧಕ್ಕೆ ನಿಂತಿರುವ ಬಂಟ್ವಾಳದಿಂದ 27 ಯಾತ್ರಾರ್ಥಿಗಳು ಶನಿವಾರವೂ ಜಮ್ಮು ಕಾಶ್ಮೀರದ ಪಹಲ್ಗಾಮ್ ಬೇಸ್‌ಕ್ಯಾಂಪ್‌ನಲ್ಲಿ ಉಳಿದುಕೊಂಡಿದ್ದು, ಯಾತ್ರೆ ಮುಂದುವರಿಸಲು ಅವಕಾಶ ಸಿಕ್ಕಿಲ್ಲ.
ಶನಿವಾರ ಯಾತ್ರಾರ್ಥಿಗಳು ಉಳಿದುಕೊಂಡಿರುವ ಬೇಸ್‌ಕ್ಯಾಂಪ್‌ಗೆ ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಭೇಟಿ ನೀಡಿದ್ದು, ರವಿವಾರದಿಂದ ಯಾತ್ರೆ ಮುಂದುವರಿಯಲು ಅವಕಾಶ ಸಿಗುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆ ಎಂದು ಬಂಟ್ವಾಳದ ಯಾತ್ರಿಕರು ತಿಳಿಸಿದ್ದಾರೆ.