ಹಿಂದೂ ಯುವಕರ ಮೇಲೆ ಹಲ್ಲೆ ಖಂಡಿಸಿ ಬಾಗಲಕೋಟೆ ಬಂದ್: ಮುಚ್ಚಿದ ಹೋಟೆಲ್, ಅಂಗಡಿಗಳು

ಬಾಗಲಕೋಟೆ, ಜುಲೈ,11: ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕಟ್ಟಿಮನಿ ಸೇರಿದಂತೆ ಮೂವರ ಮೇಲೆ ನಡೆದಿದ್ದ ಮಾರಾಣಾಂತಿಕ ಹಲ್ಲೆ ಖಂಡಿಸಿ ಹಲವು ಸಂಘಟನೆಗಳು ಸೋಮವಾರ ಬಾಗಲಕೋಟೆ ಬಂದ್ ಕರೆ ಕೊಟ್ಟಿವೆ.
ಹುಡುಗಿಯರನ್ನು ರೇಗಿಸಿದವರಿಗೆ ಬುದ್ಧಿ ಹೇಳಿದ್ದಕ್ಕೆ ಇನ್ನೊಂದು ಕೋಮಿನ ಜನ ಎಳೆನೀರು ಕೊಚ್ಚುವ ಮಚ್ಚಿನಿಂದ ಹಿಂದೂ ಜಾಗರಣ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದರು. ಕೆರೂರ ಬಸ್ ನಿಲ್ದಾಣದ ಮುಂಭಾಗ ಪರಸ್ಪರ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದು ಅರಣ್ ಕಟ್ಟಿಮನಿ ಗಂಭೀರ ಗಾಯಗೊಂಡರೆ, ಆತನ ಸಹೋದರ ಲಕ್ಷ್ಮಣ್ ಕಟ್ಟಿಮನಿ ಮತ್ತು ಯಮನೂರ್ ಚುಂಗಿನ ಗಾಯಗೊಂಡಿದ್ದರು.
ಈ ಹಲ್ಲೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಸೇರಿದಂತೆ ಗಲವು ಹಿಂದೂ ಪರ ಸಂಘಟನೆ ಸೋಮವಾರ ಬಾಗಲಕೋಟೆ ಬಂದ್ ಮಾಡಿಸಿ ಪ್ರತಿಭಟಿಸಿವೆ. ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಬಂದ್ ಆಗಿವೆ. ಆದರೆ ಶಾಲಾ ಕಾಲೇಜುಗಳು ಹಾಗೂ ಬಸ್ ಸಂಚಾರ ಎಂದಿನಂತೆ ಮುಂದುವರಿದಿವೆ. ಜಿಲ್ಲೆಯ ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಇಲಕಲ್, ಗುಳೇದಗುಡ್ಡ, ರಬಕವಿ ಬನಹಟ್ಟಿ ತಾಲೂಕು ಕೇಂದ್ರಗಳಲ್ಲಿಯೂ ಏಕಕಾಲಕ್ಕೆ ಬಂದ್ ಮಾಡಲಾಗಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಸಂಘಟನೆಗಳು ಆಗ್ರಹಿಸಿವೆ.
50 ಸಾವಿರ ಪರಿಹಾರ ನೀಡಿದ ಶ್ರೀರಾಮುಲು
ಘಟನೆಯಲ್ಲಿ ಗಾಯಗೊಂಡಿರುವ ಅರುಣ್ ಕಟ್ಟಿಮನಿ ಸೇರಿದಂತೆ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಚಿವ ಶ್ರೀರಾಮುಲು ಕೂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಗಾಯಾಳುಗಳ ಆರೋಗ್ಯ ಸ್ಥಿತಿಗತಿ ತಿಳಿದುಕೊಂಡು ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ಧನಸಹಾಯ ಚೆಕ್ ನೀಡಿದ್ದಾರೆ. ” ಗಾಯಾಳುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ, ಸರ್ಕಾರದಿಂದ ಕೊಡಬೇಕಾದ ಪರಿಹಾರವನ್ನು ಕೊಟ್ಟಿದ್ದೇನೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಈ ರೀತಿಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಪೊಲೀಸರಿಗೆ ಆದೇಶ ನೀಡಿದ್ದೇವೆ” ಶ್ರೀರಾಮುಲು ತಿಳಿಸಿದ್ದರು.
ಪೊಲೀಸರ ವೈಫಲ್ಯಕ್ಕೆ ಯತ್ನಾಳ್ ಕಿಡಿ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಪೊಲೀಸರು ಹಿಂದೂಗಳನ್ನು ಮಾತ್ರ ಬಂಧಿಸಿದ್ದಾರೆ, ಆದರೆ ಹೊಡೆದೋರೋ ಬೇರೆಯವರು. ಈ ಕಾರ್ಯವೈಖರಿ ಬದಲಾಗಬೇಕು. ನನಗೇನಾದರೂ ಗೃಹ ಮಂತ್ರಿ ಸ್ಥಾನಕೊಟ್ಟಿದ್ದರೆ ಆರೋಪಿಗಳನ್ನು ಎನ್‌ಕೌಂಟರ್ ಮಾಡಿಸುತ್ತಿದ್ದೆ. ಪೊಲೀಸರು ಹಿಂದೂಗಳ ಮೇಲೆ ಅಲ್ಲೆ ಮಾಡಿರುವ ಘಟನೆಯನ್ನು ವೈಯಕ್ತಿಕ ದ್ವೇಷ ಎಂದು ಸಿಎಂಗೆ ವರದಿ ನೀಡಿದ್ದಾರೆ. ಇದು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಕಿಡಿ ಕಾರಿದರು.
ಹಿಂದೂಗಳ ಮೇಲೆ ಉದ್ದೇಶ ಪೂರ್ವಕ ದಾಳಿ
ಬಾಗಲಕೋಟೆಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೈಗಾರಿಕೆ ಸಚಿವರಾದ ಮುರಗೇಶ ನಿರಾಣಿ, ಈ ಘಟನೆಯನ್ನ ನಾವು ಖಂಡಿಸುತ್ತೇವೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ಇದು ಸ್ಪಷ್ಟವಾಗಿ ಹಿಂದೂ ಯುವಕರ ಮೇಲೆ ನಡೆದಿರುವ ಉದ್ದೇಶ ಪೂರ್ವಕ ದಾಳಿ ಎಂದು ಸ್ಪಷ್ಟವಾಗಿ ಹೇಳಬಹುದು ಎಂದು ನಿರಾಣಿ ಹೇಳಿದ್ದಾರೆ.
ಹಿಂದು ಹೋರಾಟದಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಲ್ಲೆ
ಘಟನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಗಾಯಾಳು ಅರುಣ್ ಕಟ್ಟಿಮನಿ, ನಾನು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ನಾನು ಅನೇಕ ಹಿಂದು ಧರ್ಮದ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಈ ಹಿಂದೆ ಕನ್ನಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಹೋರಾಟ ಮಾಡಿದ್ದೆ. ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಘಟನೆ ನಡೆದಾಗ ಪೊಲೀಸರು ಕೂಡ ಅಲ್ಲೆ ಇದ್ದರು, ಸರ್ ನನ್ನನ್ನು ಹತ್ಯೆ ಮಾಡಬಹುದು ರಕ್ಷಣೆ ಮಾಡಿ ಎಂದು ಕೇಳಿಕೊಂಡರೂ ಅವರು ಕೇರ್ ಮಾಡಲಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.