ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿ ಅಂದರ್

ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿಯ ಕಾಲೇಜ ರೋಡ್‍ನಲ್ಲಿರುವ ಖೈಬರ್ ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕ್ಯಾಂಪ್ ಠಾಣೆ ಸಿಪಿಐ ಪ್ರಭಾಕರ್ ಧರ್ಮಟ್ಟಿ ನೇತೃತ್ವದ ತಂಡವು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತರು ಶಾಹಪುರದ ಜೇಡ ಗಲ್ಲಿಯ ಪ್ರದೀಪ ಲವಕುಶ ಹುಬ್ಬಳ್ಳಿ ಹಾಗೂ ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಹಾಲಿ ಶಾಹಪುರದ ಜೇಡ ಗಲ್ಲಿಯ ನಿವಾಸಿ ವಿಜಯಕುಮಾರ್ ವೀರಭದ್ರಪ್ಪ ತಾಂಡೂರ ಎಂದು ಗುರುತಿಸಲಾಗಿದೆ.
ಬಂಧಿತರಿಂದ 27,424 ರೂಪಾಯಿ ಮೌಲ್ಯದ 1 ಕೆಜಿ 705 ಗ್ರಾಂ ಗಾಂಜಾ, ಮೋಟರ್ ಸೈಕಲ್, ಮೊಬೈಲ್, ನಗದು ಸೇರಿ ಒಟ್ಟು 1 ಲಕ್ಷ 28 ಸಾವಿರದ 780 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣ ಭೇದಿಸಿದ ಕ್ಯಾಂಪ್ ಠಾಣೆ ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.