fbpx
Feature articlesInternationalKarnataka NewsNationalScienceStories

ಇಂದು ಪೇಪರ್‌ ಬ್ಯಾಗ್‌ ದಿನ: ಪ್ರಕೃತಿ ಮಾತೆಯ ಋಣ ತೀರಿಸುವಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಕಿತ್ತೂಗೆದು, ಪೇಪರ್‌ ಬ್ಯಾಗ್‌ಗಳನ್ನು ಬಳಕೆ ಮಾಡುವ ಸುವಿಚಾರದತ್ತ ಚಿತ್ತ ಬೆಳೆಸಬೇಕಿದೆ.

ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ಅಂತೆಯೇ ಪ್ರತಿಯೊಂದರ ಆವಶ್ಯಕತೆಗಳೂ ಕೂಡ ಭಿನ್ನ ವಿಭಿನ್ನವಾಗಿರುತ್ತವೆ. ಬುದ್ಧಿಜೀವಿ ಎಂದೆನಿಸಿಕೊಂಡಿರುವ ಮಾನವರಾದ ನಾವು, ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಲ್ಲಿ ಸುಲಭದ ದಾರಿಗಳನ್ನು ಹುಡುಕುತ್ತ ಬಂದಿದ್ದೇವೆ.

ಶರವೇಗದ ಹುಡುಕಾಟದಲ್ಲಿ ಪರಿಸರ ಪ್ರಜ್ಞೆಯನ್ನು ಮರೆತು ಬಿಡುವ ಹಂತಕ್ಕೆ ತಲುಪುತ್ತಿದ್ದೇವೆ. ಜೀವನದ ಅವಿಭಾಜ್ಯ ಅಂಗವೆಂಬಂತೆ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆಯನ್ನು ಮಾಡುತ್ತ, ಪರಿಸರಕ್ಕೆ ದ್ರೋಹ ಎಸಗುತ್ತಿದ್ದೇವೆ. ಪ್ರಕೃತಿ ಮಾತೆಯ ಋಣ ತೀರಿಸುವಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಕಿತ್ತೂಗೆದು, ಪೇಪರ್‌ ಬ್ಯಾಗ್‌ಗಳನ್ನು ಬಳಕೆ ಮಾಡುವ ಸುವಿಚಾರದತ್ತ ಚಿತ್ತ ಬೆಳೆಸಬೇಕಿದೆ.

ಪೇಪರ್‌ ಬ್ಯಾಗ್‌ಗಳ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ‘ಪೇಪರ್‌ ಬ್ಯಾಗ್‌ ದಿನ’ ಎಂಬ ಆಚರಣೆಯು ವಿಶಿಷ್ಟವಾದ ಮಹತ್ವವನ್ನು ಪಡೆಯುತ್ತದೆ. ವಿಶ್ವದ ವಿವಿಧ ದೇಶಗಳಲ್ಲಿ ಪೇಪರ್‌ ಬ್ಯಾಗ್‌ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ ಜುಲೈ 12ರಂದು ಪೇಪರ್‌ ಬ್ಯಾಗ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಪೇಪರ್‌ ಬ್ಯಾಗ್‌ಗಳ ಬಳಕೆಯ ಬಗ್ಗೆ ಜನರಲ್ಲಿ ಕಾಳಜಿಯನ್ನು ಮೂಡಿಸಿ, ದೈನಂದಿನ ವ್ಯವಹಾರಗಳಲ್ಲಿ ಪರಿಸರ ಸ್ನೇಹಿಯಾದ ಪೇಪರ್‌ ಬ್ಯಾಗ್‌ಗಳನ್ನು ಬಳಸಬೇಕೆಂಬುದು ಈ ಆಚರಣೆಯ ಹಿಂದಿನ ಉದ್ದೇಶ.

ಪೇಪರ್‌ ಬ್ಯಾಗ್‌ಗಳ ಉತ್ಪಾದನೆಯ ಕಲ್ಪನೆಯು ಇಂದು-ನಿನ್ನೆಯದಲ್ಲ. ಈ ಬಗ್ಗೆ ವಿವಿಧ ಮೂಲಗಳಿಂದ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕುತ್ತ ಹೋದರೆ, 1852ರಲ್ಲಿ ಓರ್ವ ಸಾಮಾನ್ಯ ಶಾಲಾ ಶಿಕ್ಷಕರಾಗಿದ್ದ ಪ್ರಾನ್ಸಿಸ್‌ ವೊಲ್ಲೆ ಕಾಗದದ ಚೀಲಗಳನ್ನು ಸಾಮೂಹಿಕವಾಗಿ ಉತ್ಪಾದಿಸುವ ಮೊದಲ ಯಂತ್ರವನ್ನು ಕಂಡುಹಿಡಿದರು ಎಂಬುದು ನಮಗೆ ಅರಿವಾಗುತ್ತದೆ. ಅದರೊಂದಿಗೆ ಅವರು ಮತ್ತು ಅವರ‌ ಸಹೋದರರು ಈ ಯಂತ್ರಕ್ಕೆ ಪೇಟೆಂಟ್‌ ಪಡೆದು ಯೂನಿಯನ್‌ ಪೇಪರ್‌ ಬ್ಯಾಗ್‌ ಕಂಪೆನಿಯನ್ನು ಸ್ಥಾಪಿಸಿದರು.

ತದನಂತರ ಹಿಂದಿನ ಶೈಲಿಯ ವಿನ್ಯಾಸಕ್ಕಿಂತ ಹೆಚ್ಚು ಭಾರವಾದ ವಸ್ತುಗಳನ್ನು ಸಾಗಿಸಬಲ್ಲ ಪ್ಲ್ಯಾಟ್‌ ಬಾಟಮ್ ಪೇಪರ್‌ ಬ್ಯಾಗ್‌ ಗಳನ್ನು ರಚಿಸಬಲ್ಲ ಯಂತ್ರವನ್ನು ಸಂಶೋಧಕ ಮಾರ್ಗರೇಟ್‌ ಇ. ನೈಟ್‌ ಅವರು 1871ರಲ್ಲಿ ಮರುವಿನ್ಯಾಸಗೊಳಿಸಿದರು.

ಮತ್ತೆ 1883ರಲ್ಲಿ ಚಾರ್ಲ್ಸ್ ಸ್ಟಿಲ್ವೆಲ್‌ ಯಂತ್ರಕ್ಕೆ ಪೇಟೆಂಟ್‌ ಪಡೆಯುವ ಮೂಲಕ ಪೇಪರ್‌ ಬ್ಯಾಗ್‌ಗಳು ಹೊಸ ರೂಪವನ್ನು ತಳೆದವು. ಹೊಸರೂಪದಂತೆ, ಚದರ-ಕೆಳಭಾಗದ ಕಾಗದದ ಚೀಲಗಳನ್ನು ಹಿತವಾದ ಬದಿಗಳಿಂದ ತಯಾರಿಸಿ, ಅವುಗಳನ್ನು ಮಡಚಲು ಮತ್ತು ಸಂಗ್ರಹಿಸಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಯಿತು. ಜತೆಯಲ್ಲಿ ಈ ಮಾದರಿಯ ಚೀಲಗಳಿಗೆ S.OS ಅಥವಾ ಸ್ವಯಂ ತೆರೆಯುವ ‘ಸಾಕ್‌’ಎಂದೂ ನಾಮಕರಣ ಮಾಡಲಾಯಿತು.

ಉತ್ತರ ಅಮೇರಿಕದ ಮಿನ್ನೇಸೋಟದ ಸೈಂಟ್‌ ಪಾಲ್‌ ನಲ್ಲಿ ದಿನಸಿ ವ್ಯಾಪಾರಿ ವಾಲ್ಟರ್‌ ಡ್ನೂಬೆರ್ನ್ ಎಂಬಾತ ಕಾಗದದ ಚೀಲಗಳನ್ನು ಬಲಪಡಿಸಲು ಮತ್ತು ಒಯ್ಯಲು ಅನುಕೂಲವಾಗುವಂತೆ ಹ್ಯಾಂಡಲ್‌ ಗಳನ್ನು ಸೇರಿಸಲು ನಾರು ಬಳಸುವ ಮೂಲಕ 1912ರಲ್ಲಿ ಪೇಪರ್‌ ಬ್ಯಾಗ್‌ಗಳಿಗೆ ಹ್ಯಾಂಡಲ್‌ ಕೂಡ ಬಂತು.

2015ರಲ್ಲಿ ವಿಶ್ವದ ಅತೀ ದೊಡ್ಡ ಪೇಪರ್‌ ಶಾಪಿಂಗ್‌ ಬ್ಯಾಗ್‌ ಅನ್ನು ಯು.ಕೆ. ಯಲ್ಲಿ ತಯಾರಿಸಿರುವುದು ಮಾತ್ರವಲ್ಲದೇ ಅದು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿಯೂ ಸ್ಥಾನ ಪಡೆಯುವಂತಾಯಿತು.

2018ರಲ್ಲಿ ‘ಯುರೋಪಿಯನ್‌ ಪೇಪರ್‌ ಬ್ಯಾಗ್‌ ಡೇ’ ಅನ್ನು ‘ದಿ ಪೇಪರ್‌ ಬ್ಯಾಗ್‌’ ಎಂಬ ವೇದಿಕೆಯಡಿ ಸ್ಥಾಪಿಸಲಾಯಿತು. ಕಾಗದದ ಚೀಲಗಳ ಬಳಕೆ, ಮರುಬಳಕೆಯನ್ನು ಪ್ರೊತ್ಸಾಹಿಸಲು ಇದನ್ನು ಪ್ರಾರಂಭಿಸಲಾಯಿತು ಎಂಬುದು ಶ್ಲಾಘನೀಯ.

ಭಾರತದಲ್ಲಿ ಸುಮಾರು 50-60ರ ದಶಕಗಳಲ್ಲಿ ಸಾಮಾನ್ಯವಾಗಿ ಅಂಗಡಿಗಳಲ್ಲಿ ಶಂಕುವಿನಾಕಾರದ ಕಾಗದದ ಪೊಟ್ಟಣಗಳನ್ನು ಮಾಡಿ, ಅದರಲ್ಲಿ ಕಡಲೆ ಬೀಜ, ದ್ವಿದಳ ಧಾನ್ಯಗಳನ್ನು ಕಟ್ಟಿಕೊಡುವ ಪರಿಪಾಠವಿತ್ತು. ಜನರಲ್ಲಿ ಪೇಪರ್‌ ಬ್ಯಾಗ್‌ಗಳ ಸ್ವಯಂ ತಯಾರಿಕಾ ಕೌಶಲವೆಂಬಂತೆ, ಆ ಪೊಟ್ಟಣಗಳನ್ನು ಕಟ್ಟುವುದೇ ಒಂದು ಸೃಜನಶೀಲ ಚಟುವಟಿಕೆಯಂತಿತ್ತು.
1970ರ ದಶಕದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಪರಿಚಯಿಸಲಾದ ಬಳಿಕದಲ್ಲಿ ಈ ಕಾಗದದ ಪೊಟ್ಟಣಗಳ ಜಾಗವನ್ನು ಪ್ಲಾಸ್ಟಿಕ್‌ ಚೀಲಗಳು ಆವರಿಸಿದವು. ಜನರಲ್ಲಿ ಪ್ಲಾಸ್ಟಿಕ್‌ ಚೀಲಗಳ ಬಳಕೆಯು ಅಧಿಕಗೊಂಡು, ಪರಿಸರ ಮಾಲಿನ್ಯದತ್ತ ಈ ಪ್ಲಾಸ್ಟಿಕ್‌ ಚೀಲಗಳು ತಮ್ಮ ಕಬಂಧಬಾಹುಗಳನ್ನು ಚಾಚುವಂತಾಯಿತು. ಆದರೆ ಈಗ ಮತ್ತೆ ಇತಿಹಾಸ ಮರುಕಳಿಸುವಂತೆ, ಜನರು ಏಕಬಳಕೆಯ ಪ್ಲಾಸ್ಟಿಕ್‌ ಚೀಲಗಳ ದುಷ್ಪರಿಣಾಮಗಳನ್ನು ಅರ್ಥೈಸಿಕೊಳ್ಳುತ್ತ, ಮತ್ತೆ ಪೇಪರ್‌ ಬ್ಯಾಗ್‌ಗಳತ್ತ ಮುಖಮಾಡುತ್ತಿ¨ªಾರೆ.

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್‌ ಬ್ಯಾಗ್‌ನ ಬಳಕೆಯು ಜೀವ ಸಂಕುಲದ ಉಳಿವಿಗೆ ಕಾರಣವಾಗಬಲ್ಲದು. ಭಾರತ ಸರಕಾರವು ಈ ವರ್ಷದ ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ಕಟ್ಟುನಿಟ್ಟಿನ ನಿರ್ಬಂಧದ ಆದೇಶ ಜಾರಿಗೊಳಿಸಿದೆ. ಇದರಿಂದಾಗಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ನಿರ್ಮೂಲನೆ ಮಾಡಿ, ಪೇಪರ್‌ ಬ್ಯಾಗ್‌ಗಳ ಬಳಕೆಯತ್ತ ಚಿತ್ತ ಬೆಳೆಸಲು ಇದೊಂದು ಸಕಾಲವೆಂಬಂತಾಗಿದೆ.

ಪೇಪರ್‌ ಬ್ಯಾಗ್‌ಗಳು ನವೀಕರಿಸಬಹುದಾದ ಕಚ್ಚಾ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ಇವುಗಳನ್ನು ಮರುಬಳಕೆ ಮಾಡಬಹುದಾಗಿದೆ ಮತ್ತು ಮಣ್ಣಿನಲ್ಲಿ ಸುಲಭವಾಗಿ ಜೈವಿಕ ವಿಘಟನೆ ಹೊಂದುವುದರಿಂದ ಇವು ಪರಿಸರ ಸ್ನೇಹಿಯಾಗಿದೆ. ಅದಲ್ಲದೇ ಪೇಪರ್‌ ಬ್ಯಾಗ್‌ ಗಳನ್ನು ಮನೆಯ ಕಾಂಪೋಸ್ಟ್‌ ಘಟಕಗಳಲ್ಲಿ ಸುಲಭವಾಗಿ ಮಿಶ್ರ ಗೊಬ್ಬರ ಕೂಡ ಮಾಡಬಹುದು. ಪೇಪರ್‌ ಬ್ಯಾಗ್‌ಗಳು ಅಗ್ಗವಾಗಿದ್ದು, ಸರ್ವರಿಗೂ ಸುಲಭ ಬೆಲೆಯಲ್ಲಿ ಸಿಗುವಂತಿರುತ್ತದೆ.

ಮುಂದಿನ ತಲೆಮಾರಿಗೆ ಭುವಿಯ ನೆಲ, ಜಲದ ಪಾವಿತ್ರ್ಯತೆಯನ್ನು ಉಳಿಸಿ ಹೋಗುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ಗಳನ್ನು ಧಿಕ್ಕರಿಸುವುದು ಅಪೇಕ್ಷಣೀಯವಾಗಿದೆ. ನಿಸರ್ಗದಿಂದ ಎಲ್ಲವನ್ನೂ ಉಚಿತವಾಗಿ ಪಡೆಯುತ್ತಿರುವ ನಾವು, ಪರಿಸರ ರಕ್ಷಣೆಗೆ ಕಟಿಬದ್ಧರಾಗುವ ಕೈಂಕರ್ಯದಲ್ಲಿ ಪೇಪರ್‌ ಬ್ಯಾಗ್‌ಗಳು ಮಹೋನ್ನತ ಪಾತ್ರವನ್ನು ವಹಿಸುತ್ತವೆ. ಎಳೆಯ ಮಕ್ಕಳಿಗೆ ಪೇಪರ್‌ ಬ್ಯಾಗ್‌ಗಳ ಬಳಕೆಯ ಔಚಿತ್ಯವನ್ನು ತಿಳಿಸಿ, ಅವರಲ್ಲಿ ಪೇಪರ್‌ ಬ್ಯಾಗ್‌ಗಳ ಬಗ್ಗೆ ಅರಿವು ಮೂಡಿಸುವುದರಿಂದ ಮುಂದಿನ ದಿನಗಳಲ್ಲಿ ಪೇಪರ್‌ ಬ್ಯಾಗ್‌ಗಳ ಬಳಕೆಯನ್ನು ಗರಿಷ್ಠ ಮಟ್ಟಕ್ಕೆ ತಲುಪಿಸಬಹುದಾಗಿದೆ. ಆಗ ‘ಪೇಪರ್‌ ಬ್ಯಾಗ್‌ ದಿನ’ವು ಹೆಚ್ಚು ಅರ್ಥಪೂರ್ಣ ದಿನವಾಗಿ ಪರಿಣಮಿಸುತ್ತದೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: