ಹಾಡಹಗಲೇ ನಗರಸಭೆ ಮಾಜಿ ಅಧ್ಯಕ್ಷನ ಬರ್ಬರ ಕೊಲೆ

ಕಲಬುರಗಿ: ನಗರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ಹೊಟ್ಟೆಗೆ ತಲವಾರ್ ಚುಚ್ಚಿದ ಹಂತಕರು ಅದನ್ನು ಹಾಗೇ ಬಿಟ್ಟು ಹೋಗಿರುವಂಥ ಭೀಕರ ಪ್ರಕರಣ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ.;
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ಅದೂ ಶಹಬಾದ್ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಕೊಲೆಗೀಡಾದ ವ್ಯಕ್ತಿ.
ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿ, 15 ರಿಂದ 20 ಬಾರಿ ಇರಿದಿದ್ದಾರೆ. ಬಳಿಕ ತಲವಾರ್ನಿಂದ ಎದೆಗೆ ಚುಚ್ಚಿ ಅದನ್ನು ಹಾಗೇ ಇಟ್ಟು ಹೋಗಿದ್ದಾರೆ. ಗಂಭೀರ ಗಾಯಗೊಂಡ ಗಿರೀಶ್ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ.
2020ರ ಫೆಬ್ರವರಿಯಲ್ಲಿ ಗಿರೀಶ್ ಕಂಬಾನೂರ್ ಸಹೋದರ ಸತೀಶ್ ಕಂಬಾನೂರ್ ಕೊಲೆಯಾಗಿತ್ತು. ಇದೀಗ ಗಿರೀಶ್ ಕೂಡ ಕೊಲೆಯಾಗಿ ಹೋಗಿದ್ದು, ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.