ಸಲ್ಮಾನ್ನನ್ನು ಕೊಲ್ಲಲು ಮಾಡಿದ್ದ ಪ್ರಯತ್ನ, ಗ್ಯಾಂಗ್ಸ್ಟರ್ ಹೇಳಿಕೆಯಿಂದ ಪೊಲೀಸರೇ ಶಾಕ್!

ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ಸಲ್ಮಾನ್ ಖಾನ್ನನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿದ್ದೇ ಎಂದಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
2018ರಲ್ಲೇ ಸಲ್ಮಾನ್ನನ್ನು ಮುಗಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆ, ಅದಕ್ಕೆಂದೇ ಬರೋಬ್ಬರಿ 4 ಲಕ್ಷ ರೂ.ಬೆಲೆಯ ಬಂದೂಕನ್ನು ಕೂಡ ಖರೀದಿಸಿದ್ದೆ ಎನ್ನುವ ಮೂಲಕ ಬಿಷ್ಣೋಯಿ ರೂಪಿಸಿದ್ದ ಸಂಚು ಕುರಿತು ಮತ್ತಷ್ಟು ಬಯಲಾಗಿದೆ.
ತನ್ನ ಒಂದೊಂದೇ ತಪ್ಪನ್ನು ಒಪ್ಪಿಕೊಳ್ಳುತ್ತಿರುವ ಬಿಷ್ಣೋಯಿ, ಮೊದಲ ಗುರಿ ಸಲ್ಮಾನ್ ಖಾನ್ ಅವರೇ ಆಗಿದ್ದರು, ಅವರನ್ನು ತುಂಬಾ ದ್ವೇಷಿಸುತ್ತೇನೆ ಎಂದು ಈ ಹಿಂದಿನ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ.
ಸದ್ಯ ಪಂಜಾಬ್ನ ಖ್ಯಾತ ಗಾಯಕರಾಗಿದ್ದ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಈ ನಡುವೆ ಸಲ್ಮಾನ್ ಖಾನ್ ಹತ್ಯೆಗೂ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು. ಸದ್ಯ ಈ ಎರಡೂ ಪ್ರಕರಣದಲ್ಲಿ ಆರೋಪಿಯಾಗಿರುವ ಲಾರೆನ್ಸ್ ವಿಚಾರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.