PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಶಕ್ಕೆ ಗಣಪತಿ ಭಟ್! ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ದಿನ ದಿನಕ್ಕೂ ಸ್ಫೋಟಕ ತಿರುವು ಪಡೆಯುತ್ತಿದ್ದು, ಇದೀಗ ಸಿಐಡಿ ಅಧಿಕಾರಿಗಳು ಶಿರಸಿ ಮೂಲದ 62 ವರ್ಷದ ಗಣಪತಿ ಭಟ್ ಎಂಬುವರನ್ನ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆ ಹಾಜರಾದ ಗಣಪತಿ ಭಟ್, ವಿಚಾರಣೆ ಎದುರಿಸುತ್ತಿದ್ದಾರೆ. ಅತ್ತ ಈ ಗಣಪತಿ ಭಟ್ರನ್ನು ಗೃಹ ಸಚಿವ ಆರಗ ಜ್ಞಾನೇಂದ್ರರ ಆಪ್ತ ಸಹಾಯಕ ಎಂಬ ಗುಸುಗುಸು ವ್ಯಾಪಕವಾಗಿ ಹರಡಿತ್ತು. ಪಿಎಸ್ಐ ಹುದ್ದೆ ಹಗರಣದಲ್ಲಿ ಗೃಹ ಸಚಿವರ ಆಪ್ತ ಸಹಾಯಕನ ಕೈವಾಡವಿದೆ, ಗೃಹ ಸಚಿವರಿಗೂ ಸಂಕಷ್ಟ ಎದುರಾಗಬಹುದು ಎಂಬ ಬಿಸಿಬಿಸಿ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿತ್ತು.
ಅಷ್ಟರಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಗೃಹಸಚಿವರು, ಗಣಪತಿ ಭಟ್ ಎನ್ನುವ ಹೆಸರಿನಲ್ಲಿ ನಮ್ಮ ಒಎಸ್ಡಿ ಇದ್ದಾರೆ. ಇಂದು ಸಿಐಡಿ ವಶಕ್ಕೆ ಪಡೆದಿರುವ ವ್ಯಕ್ತಿ ನಮ್ಮ ಕಾರ್ಯಾಲಯದ ಸಿಬ್ಬಂದಿಯಲ್ಲ. ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ. ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಶಿರಸಿ ಮೂಲದ ಗಣಪತಿ ಭಟ್ಗೆ ಪಿಎಸ್ಐ ಹಗರಣದ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಅವರು ಸಾಕಷ್ಟು ವರ್ಗಾವಣೆಯಲ್ಲಿ ತೊಡಗಿದ್ದರು. ಅದನ್ನೇ ವೃತ್ತಿ, ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಹೀಗಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಅಕ್ರಮದಲ್ಲಿ ಯಾರೇ ಇದ್ದರೂ ಅವರನ್ನ ಬಿಡೋದಿಲ್ಲ ಎಂದರು.