ಯೂಟ್ಯೂಬ್‌ನಿಂದ ಕಳ್ಳತನದ ಪಾಠ ದುಬಾರಿ ಕಾರು ಕದ್ದು ಮತ್ತೆ ಜೈಲು ಸೇರಿದ!

ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಪದವೀಧರ
ಯೂಟ್ಯೂಬ್ ಟ್ಯುಟೋರಿಯಲ್ ವೀಡಿಯೋ ನೋಡಿ ಬಿಕಾಂ ಪದವೀಧರನೊಬ್ಬ ಆತ್ಯಾಧುನಿಕ ಕಾರು ಕದ್ದು, ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಕರ್ನಾಟಕದ ಮುಳಬಾಗಿಲು ತಾಲೂಕಿನ 32 ವರ್ಷದ ಅರುಣ್ ಕುಮಾರ್ ಅಂತ ಗುರುತಿಸಲಾಗಿದೆ.
ಜೈಲಿನಿಂದ ಬಂದು ಮತ್ತೆ ಜೈಲು ಸೇರಿದ ಭೂಪ
ಬಿಕಾಂ ಪದವೀಧರನಾಗಿದ್ದ ಅರುಣ್ ಕುಮಾರ್ ಈ ಹಿಂದೆ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ಬಳಿಕ ಆತನನ್ನು ಆಂಧ್ರಪ್ರದೇಶದ ಮದನಪಲ್ಲಿ ಉಪ ಜೈಲಿನಲ್ಲಿ ಇರಿಸಲಾಗಿತ್ತು. ಈತ ಇತ್ತೀಚಿಗಷ್ಟೇ ಜಾಮೀನು ಪಡೆದು, ಜೈಲಿನಿಂದ ಬಿಡುಗಡೆಯಾಗಿ ಊರಿಗೆ ಬಂದಿದ್ದ.
ಜೈಲಿನಲ್ಲಿ ಸಹಕೈದಿಯಿಂದ ಕಳ್ಳತನದ ಪಾಠ
ಅರುಣ್ ಕುಮಾರ್ ಜೈಲಿನಲ್ಲಿ ಇದ್ದಾಗ ಸಹಕೈದಿ ರಾಕೇಶ್ ಎಂಬಾತನ ಸ್ನೇಹ ಬೆಳೆಸಿದ್ದ. ಈ ವೇಳೆ ಆತ ರಾಕೇಶ್ ಕುಮಾರ್‌ನಿಂದ ಕಾರಿನ ಬೀಗಗಳನ್ನು ಭೇದಿಸಲು ಬಳಸಬಹುದಾದ ಆಟೋ ಡಯಾಗ್ನೋಸ್ಟಿಕ್ ಉಪಕರಣದ ಬಗ್ಗೆ ತಿಳಿದುಕೊಂಡಿದ್ದ ಎನ್ನಲಾಗಿದೆ.
ಯೂಟ್ಯೂಬ್‌ನಿಂದ ಕಳ್ಳತನದ ಪಾಠ
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅರುಣ್ ಕುಮಾರ್ ಆಟೋ ಡಯಾಗ್ನೋಸ್ಟಿಕ್ ಉಪಕರಣದ ಖರೀದಿಸಿದ್ದಾನೆ. ಬಳಿಕ ಯೂಟ್ಯೂಬ್‌ನಲ್ಲಿ ದುಬಾರಿ ಕಾರು ಕಳ್ಳತನ ಮಾಡುವುದು ಹೇಗೆ ಎಂಬ ಟ್ಯುಟೋರಿಯಲ್ ವಿಡಿಯೋ ನೋಡಿ ಕಳ್ಳತನ ಮಾಡುವುದನ್ನು ಕಲಿತಿದ್ದಾನೆ ಎನ್ನಲಾಗಿದೆ.
ಆತ್ಯಾಧುನಿಕ ಕಾರು ಕದಿಯುವಾಗ ಪೊಲೀಸರಿಂದ ಅರೆಸ್ಟ್
ಇದಾದ ಬಳಿಕ ಕಾರು ಕಳ್ಳತನಕ್ಕೆ ಸರ್ವ ಸನ್ನದ್ಧನಾದ ಅರುಣ್ ಕುಮಾರ್, ಸೀದಾ ಬೆಂಗಳೂರಿಗೆ ಎಚ್‌ಎಸ್‌ಆರ್ ಲೇಔಟ್ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿ ಕಾರ್ಯಾಚರಣೆ ಶುರು ಮಾಡಿದ್ದಾನೆ. ರಾತ್ರಿಯಲ್ಲಿ ಅತ್ಯಾಧುನಿಕ ವಾಹನಗಳನ್ನು ಕದಿಯಲು ಪ್ರಾರಂಭಿಸಿದ್ದಾನೆ.
ದುಬಾರಿ ಕಾರು ಕದಿಯುತ್ತಿದ್ದುದು ಹೇಗೆ?
ಪೊಲೀಸ್ ಅಧಿಕಾರಿಗಳು ಹೇಳುವಂತೆ ಅರುಣ್ ಕುಮಾರ್ ಮೊದಲು ಕಾರಿನ ಗಾಜುಗಳನ್ನು ಒಡೆದು ಹಾಕುತ್ತಿದ್ದ. ಬಳಿಕ ಚಕ್ರದ ಕೆಳಗೆ ಗ್ಯಾಜೆಟ್ ಅನ್ನು ಜೋಡಿಸುತ್ತಿದ್ದ. ಬಳಿಕ ಕಾರಿನ ಲಾಕ್ ಅನ್ನು ಓಪನ್ ಮಾಡಲು ಸಾಫ್ಟ್‌ವೇರ್ ಅನ್ನು ಬಳಸುತ್ತಿದ್ದರು. ಬಳಿಕ ಈಸಿಯಾಗಿ ಕಾರು ಕದಿಯುತ್ತಿದ್ದ ಎನ್ನಲಾಗಿದೆ.
ಕದ್ದ ಕಾರು ತಮಿಳುನಾಡು, ಆಂಧ್ರಕ್ಕೆ ಮಾರಾಟ
ನಂತರ ಅಂತಹ ಕದ್ದ ಕಾರುಗಳನ್ನು ತಮಿಳುನಾಡು ಅಥವಾ ಆಂಧ್ರಪ್ರದೇಶಕ್ಕೆ ಸಾಗಿಸಿ, ನಕಲಿ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಪುಸ್ತಕಗಳನ್ನು ಬಳಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಕದ್ದ ವಾಹನಗಳನ್ನು ತಿರುವಣ್ಣಾಮಲೈ, ಚೆನ್ನೈ, ವೆಲ್ಲೂರು, ನಾಮಕ್ಕಲ್, ನಾಗಪಟ್ಟಿಣಂ ಮತ್ತು ತಮಿಳುನಾಡಿನ ಇತರ ನಗರಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸರ ಪ್ರಕಾರ ಈತ 70 ಲಕ್ಷ ರೂಪಾಯಿ ಮೌಲ್ಯದ ಹತ್ತು ಕಾರು ಹಾಗೂ ಬೈಕ್ ಕದ್ದಿದ್ದಾನೆ.
ಕಾರು ಮಾರಾಟದ ಬಳಿಕ ಗೋವಾದಲ್ಲಿ ಮೋಜು ಮಸ್ತಿ
ಕಾರು ಮಾರಾಟದ ಬಳಿಕ ಬಂದ ಹಣದಿಂದ ಈತ ಐಶಾರಾಮಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಗೋವಾದ ಕ್ಯಾಸಿನೊಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.